ಮದುವೆ ಮಂಟಪಕ್ಕೇ ಬಂದ ಪೊಲೀಸರು: ಅಕ್ಷತೆ ಬೀಳುವ ಮುನ್ನವೇ ಮದುಮಗ ಅರೆಸ್ಟ್; ಗೋಗರೆದ ವಧು

ಭೋಪಾಲ್: ವಿವಾಹ ಸಮಾರಂಭವೊಂದರ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶ ಪೊಲೀಸರು ವಿವಾಹ ಸಮಾರಂಭದ ಮಧ್ಯೆಯೇ ಗ್ಯಾಂಗ್‌ಸ್ಟರ್ ವರ ಹಾಗೂ ಆತನ ಸಹಚರರನ್ನು ಬಂಧಿಸಿದ ನಾಟಕೀಯ ಘಟನೆ ಬೆಳಕಿಗೆ ಬಂದಿದೆ. ಕೆಲವೇ ಗಂಟೆಗಳಲ್ಲಿ ವಧು ಕೊಹ್-ಇ-ಫಿಜಾ ಪೊಲೀಸ್ ಠಾಣೆಗೆ ಆಗಮಿಸಿ, ವಿವಾಹ ಸಮಾರಂಭ ಮುಗಿಯುವವರೆಗೆ ಬಂಧಿಸಬೇಡಿ ಎಂದು ಗೋಗರೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ಸಾಹೇಬ್, ನನ್ನ ಜೀವನ ಸರ್ವನಾಶವಾಗುತ್ತದೆ. ನನ್ನ ತಪ್ಪೇನು? ಆತ ಎಸಗಿದ ಅಪರಾಧಗಳ ಬಗ್ಗೆ ನನಗೆ ಅರಿವಿಲ್ಲ. ಮನೆಯಲ್ಲಿ ಅತಿಥಿಗಳು ಕಾಯುತ್ತಿದ್ದಾರೆ. ಅರಿಶಿನ ಶಾಸ್ತ್ರ ಮತ್ತು ಇತರ ವಿಧಿವಿಧಾನಗಳು ಮುಗಿದಿವೆ,” ಎಂದು ವಧು ಸೀಮಾ ಪೊಲೀಸ್ ಅಧಿಕಾರಿಗಳ ಮುಂದೆ ಅಳುತ್ತಾ ಮನವಿ ಮಾಡಿದರು.
ವರನನ್ನು ಬಿಡುಗಡೆ ಮಾಡುವಂತೆ ಆಕೆ ಮನವಿ ಮಾಡಿದರು. ಆಕಾಶ್ ಅಲಿಯಾಸ್ ಭೂರಾನನ್ನು ವಿವಾಹ ಶಾಸ್ತ್ರ ಮುಗಿಯುವವರೆಗೆ, ಅಂದರೆ ಎರಡು ಗಂಟೆಗಳ ಕಾಲ ಬಿಡುಗಡೆ ಮಾಡುವಂತೆ ಮೊರೆ ಇಟ್ಟರು. ಅಧಿಕಾರಿಗಳು ನಿರಾಕರಿಸಿದಾಗ, ಮತ್ತೆ ಮನವಿ ಮಾಡಿಕೊಂಡು, “ಆತನ ಬಿಡುಗಡೆ ಅಸಾಧ್ಯವಾದರೆ ಕನಿಷ್ಠ ಪೊಲೀಸ್ ಕಸ್ಟಡಿಯಲ್ಲೇ ವಿವಾಹ ನೆರವೇರಿಸಲು ಅವಕಾಶ ನೀಡಿ,” ಎಂದು ಕೋರಿದರು. ಆದರೆ ಪೊಲೀಸರು ಇದಕ್ಕೂ ಸೊಪ್ಪು ಹಾಕಲಿಲ್ಲ.
