ದಲಿತ ಮಹಿಳೆಯರ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ: ಪುಣೆಯಲ್ಲಿ ಪ್ರಕರಣ

ಪುಣೆ: ಗಂಡನ ಮನೆಯಲ್ಲಿ ಕಿರುಕುಳ ಸಹಿಸಲಾಗದೆ ಪರಾರಿಯಾಗಿದ್ದ ವಿವಾಹಿತ ಮಹಿಳೆಯ ಹುಡುಕಾಟಕ್ಕಾಗಿ ತಮ್ಮ ಫ್ಲ್ಯಾಟ್ ಗೆ ನುಗ್ಗಿದ ಮಹಾರಾಷ್ಟ್ರ ಪೋಲಿಸರು ತಮ್ಮನ್ನು ಥಳಿಸಿ ಕಿರುಕುಳ ನೀಡಿದ್ದಲ್ಲದೆ ತಮ್ಮನ್ನು ಪೋಲಿಸ್ ಠಾಣೆಗೆ ಎಳೆದೊಯ್ದಿದ್ದರು ಎಂದು ಮೂವರು ದಲಿತ ಮಹಿಳೆಯರು ಆರೋಪಿಸಿದ್ದಾರೆ.

ಮೂವರು ಮಹಿಳೆಯರ ಪೈಕಿ ಇಬ್ಬರು ಪುಣೆಯ ಕೋಥರೂಡ್ ನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದು,ಆ.2ರಂದು ಯಾವುದೇ ನೋಟಿಸ್ ಅಥವಾ ವಾರಂಟ್ ಇಲ್ಲದೆ ತಮ್ಮ ಫ್ಲ್ಯಾಟ್ ಗೆ ನುಗ್ಗಿದ್ದ ಕೋಥರೂಡ್ ಮತ್ತು ಛತ್ರಪತಿ ಸಂಭಾಜಿ ನಗರ ಪೋಲಿಸರು ತಮ್ಮ ಕೊಠಡಿಗಳನ್ನು ಶೋಧಿಸಿದ್ದರು, ತಮ್ಮ ಮೊಬೈಲ್ ಫೋನ್ ಗಳನ್ನು ತೆರೆದು ಖಾಸಗಿ ಚಾಟ್‌ಗಳನ್ನು ಓದಿದ್ದರು, ವೈಯಕ್ತಿಕ ಫೋಟೊಗಳನ್ನು ವೀಕ್ಷಿಸಿದ್ದರು ಮತ್ತು ಜಾತಿ ನಿಂದನೆಗೈದು ತಮ್ಮನ್ನು ಅವಮಾನಿಸಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ.
ಛತ್ರಪತಿ ಸಂಭಾಜಿ ನಗರದ ವಿವಾಹಿತ ಮಹಿಳೆ 23ರ ಹರೆಯದ ಪ್ರಿಯಾ(ಹೆಸರು ಬದಲಿಸಲಾಗಿದೆ) ಗಂಡ ಮತ್ತು ಅತ್ತೆ-ಮಾವನ ಕಿರುಕುಳ ಸಹಿಸಲಾಗದೇ ಜು.31ರಂದು ಮನೆ ಬಿಟ್ಟು ಪುಣೆಗೆ ಬಂದಿದ್ದಳು. ಆಕೆಯ ಪತಿ ಛತ್ರಪತಿ ಸಂಭಾಜಿ ನಗರದ ಸತಾರಾ ಪೋಲಿಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ.
ಕೋಥರೂಡ್ ನಲ್ಲಿ ಪ್ರಿಯಾ ನಂತರ ಪೋಲಿಸರಿಂದ ಕಿರುಕುಳವನ್ನು ಆರೋಪಿಸಿರುವ ಮೂವರು ದಲಿತ ಮಹಿಳೆಯರ ಪೈಕಿ ತನ್ನ ಸ್ನೇಹಿತೆಯನ್ನು ಸಂಪರ್ಕಿಸಿದ್ದು, ಆಕೆ ಸಾಮಾಜಿಕ ಕಾರ್ಯಕರ್ತೆ ಶ್ವೇತಾ ಪಾಟೀಲ್ ಅವರ ದೂರವಾಣಿ ಸಂಖ್ಯೆಯನ್ನು ನೀಡಿದ್ದಳು. ಪಾಟೀಲ್ ತನಗೆ ಪರಿಚಿತರಾಗಿದ್ದ ಇಬ್ಬರು ಮಹಿಳೆಯರ ಫ್ಲ್ಯಾಟ್ ನಲ್ಲಿ ರಾತ್ರಿ ಪ್ರಿಯಾಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು.
ಮರುದಿನ, ಆ.1ರಂದು ಪ್ರಿಯಾ ಪುಣೆಯ ಮುಂಧ್ವಾ ಪ್ರದೇಶದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್ ಗೆ ತೆರಳಿದ್ದಳು. ಈ ಕೇಂದ್ರವು ಮಹಿಳೆಯರಿಗೆ ಆಶ್ರಯ ನೀಡುವ ಜೊತೆಗೆ ಕೌಟುಂಬಿಕ ಹಿಂಸಾಚಾರ ಅಥವಾ ಇತರ ಯಾವುದೇ ರೀತಿಯ ಕಿರುಕುಳವನ್ನು ಎದುರಿಸುತ್ತಿರುವ ಮಹಿಳೆಯರಿಗೆ ಕಾನೂನು ನೆರವನ್ನೂ ಒದಗಿಸುತ್ತದೆ.
ಪ್ರಿಯಾ ಒಂದೂವರೆ ದಿನ ತಮ್ಮ ಕೇಂದ್ರದಲ್ಲಿದ್ದು, ನಂತರ ನಿರ್ಗಮಿಸಿದ್ದಳು ಎಂದು ಅಲ್ಲಿಯ ಆಡಳಿತಾಧಿಕಾರಿ ಸವಿತಾ ಭೋರೆ ತಿಳಿಸಿದರು. ಆಗಿನಿಂದ ಪ್ರಿಯಾ ತನ್ನ ತವರುಮನೆಯಲ್ಲಿ ವಾಸವಿದ್ದಾಳೆ ಎಂದು ಪೋಲಿಸರು ನಂತರ ಹೇಳಿದ್ದಾರೆ.
ಪ್ರಿಯಾ ದಲಿತ ಮಹಿಳೆಯರ ಫ್ಲ್ಯಾಟ್‌ನಿಂದ ನಿರ್ಗಮಿಸಿದ ಬಳಿಕ ಕೋಥರೂಡ್ ಮತ್ತು ಛತ್ರಪತಿ ಸಂಭಾಜಿ ನಗರ ಪೋಲಿಸರು ಅಲ್ಲಿಗೆ ತೆರಳಿದ್ದರು. ಅವರು ಫ್ಲ್ಯಾಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಪ್ರಿಯಾಳ ಮಾವ, ನಿವೃತ್ತ ಪೋಲಿಸ್ ಅಧಿಕಾರಿ ಸಖಾರಾಮ್ ಸನಾಪ್ ಉಪಸ್ಥಿತರಿದ್ದರು ಎಂದು ಮಹಿಳೆಯರು ಆರೋಪಿಸಿದ್ದಾರೆ. ಪ್ರಿಯಾಳ ಸ್ನೇಹಿತೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ್ದ ಪೋಲಿಸರು ಆಕೆಯನ್ನೂ ಕೋಥರೂಡ್ ಠಾಣೆಗೆ ಕರೆತಂದಿದ್ದರು.
ಪೊಲೀಸರು ತಮ್ಮ ಹೆಸರುಗಳು ಮತ್ತು ಅಡ್ಡಹೆಸರುಗಳನ್ನು ಕೇಳಿದ ಬಳಿಕ ತಮಗೆ ಜಾತಿನಿಂದನೆಗೈದಿದ್ದರು. ಮಹಿಳಾ ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದರು. ಪ್ರಿಯಾ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಇರುವುದನ್ನು ದೃಢಪಡಿಸಿಕೊಂಡ ನಂತರವೂ ಪೋಲಿಸರು ತಮ್ಮನ್ನು ಐದಾರು ಗಂಟೆಗಳ ಕಾಲ ಠಾಣೆಯಲ್ಲಿ ಇಟ್ಟುಕೊಂಡಿದ್ದರು ಎಂದು ಮಹಿಳೆಯರು ಆರೋಪಿಸಿದ್ದಾರೆ.
ಪೋಲಿಸರು ಸಖಿ ಒನ್ ಸ್ಟಾಪ್ ಸೆಂಟರ್ ನಿಂದ ಪ್ರಿಯಾಳನ್ನೂ ಠಾಣೆಗೆ ಕರೆತಂದಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
ಆ.2ರಂದು ಮೂವರು ದಲಿತ ಮಹಿಳೆಯರು ಪೋಲಿಸರ ವರ್ತನೆಯ ವಿರುದ್ಧ ದೂರು ದಾಖಲಿಸಲು ಶ್ವೇತಾ ಪಾಟೀಲ್, ವಕೀಲ ಪರಿಕ್ರಮ ಖೋತ್ ಮತ್ತು ಇತರ ಸಾಮಾಜಿಕ ಕಾರ್ಯಕರ್ತರೊಂದಿಗೆ ಕೋಥರೂಡ್ ಪೋಲಿಸ್ ಠಾಣೆಗೆ ತೆರಳಿದ್ದರು. ಆದರೆ ದೂರು ದಾಖಲಿಸಿಕೊಳ್ಳಲು ಪೋಲಿಸರು ನಿರಾಕರಿಸಿದ್ದಾರೆ.
ಪೋಲಿಸರು ಯಾವುದೇ ತಪ್ಪು ಮಾಡಿಲ್ಲ, ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಕೋಥರೂಡ್ ಎಸಿಪಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಮಹಿಳೆಯರ ಆರೋಪ ನಿಜವೆಂದು ಕಂಡುಬಂದರೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಂಟಿ ಪೋಲಿಸ್ ಆಯಕ್ತ ರಂಜನ್ ಕುಮಾರ್ ಶರ್ಮಾ ಸಮಜಾಯಿಷಿ ನೀಡಿದ್ದಾರೆ.
