ಯೋಜಿತ ಸಿ-ಸೆಕ್ಷನ್ ಹೆರಿಗೆಯಿಂದ ಲ್ಯುಕೆಮಿಯಾ ಅಪಾಯ-ಮಾಹಿತಿ ಬಹಿರಂಗ

ನವದೆಹಲಿ :ತುರ್ತು ಸಂದರ್ಭದಲ್ಲಿನ ಸಿ-ಸೆಕ್ಷನ್ಗಿಂತ ಯೋಜಿತ ಸಿ-ಸೆಕ್ಷನ್ (ಸಿಸೇರಿಯನ್) ಹೆರಿಗೆಯಿಂದ ಮಗುವಿಗೆ ಭವಿಷ್ಯದಲ್ಲಿ ಲ್ಯುಕೆಮಿಯಾದಂಥ ಬ್ಲಡ್ ಕ್ಯಾನ್ಸರ್ ಎದುರಾಗುವ ಅಪಾಯ ಹೆಚ್ಚಾಗಿರುತ್ತದೆ ಎಂಬುದು ಅಧ್ಯಯನವೊಂದರಿಂದ ಕಂಡುಬಂದಿದೆ.

ಸಿಸೇರಿಯನ್ ಹೆರಿಗೆಯಲ್ಲಿ ತಾಯಿಯ ಹೊಟ್ಟೆ ಮತ್ತು ಗರ್ಭಾಶಯದಲ್ಲಿ ಕತ್ತರಿಪ್ರಯೋಗ ಮಾಡಬೇಕಾಗುತ್ತದೆ.
ಹೆರಿಗೆ ವೇಳೆ ಸಿ-ಸೆಕ್ಷನ್ ನಡೆಸುವ ಅಗತ್ಯ ತುರ್ತಾಗಿ ಬರುವಂಥದ್ದಾಗಿರಬಹುದು ಇಲ್ಲವೇ ಯೋಜಿತವಾಗಿದ್ದರಲೂಬಹುದು. ಆದರೆ, ಯೋಜಿತ ಸಿ-ಸೆಕ್ಷನ್ನಿಂದ ಜನಿಸಿದ ಮಗುವಿಗೆ ಭವಿಷ್ಯದಲ್ಲಿ ಅಪಾಯದ ಸಾಧ್ಯತೆ ಅಧಿಕ ಎಂದು ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ವೈದ್ಯಕೀಯವಾಗಿ ಸೂಚಿಸಲಾದ ಸಿ-ಸೆಕ್ಷನ್ಗಳ ಬಗ್ಗೆ ತಾಯಂದಿರು ಆತಂಕಪಡುವುದನ್ನು ನಾವು ಬಯಸುವುದಿಲ್ಲ. ಆದರೆ ವೈದ್ಯಕೀಯವಾಗಿ ಸೂಚಿಸದ ಸಿ-ಸೆಕ್ಷನ್ನಲ್ಲಿ ಜನಿಸಿದ ಮಕ್ಕಳಲ್ಲಿ ಕ್ರಮೇಣ ಅಸ್ತಮಾ, ಅಲರ್ಜಿ ಅಥವಾ ಟೈಪ್ 1 ಮಧುಮೇಹಗಳು ಕಂಡುಬರುವುದು ಅಧಿಕ ಎಂಬುದು ಕಂಡುಬಂದಿದೆ. ಹೀಗಾಗಿ ವೈದ್ಯಕೀಯವಾಗಿ ಸೂಚಿಸಿರದ ಸಿ-ಸೆಕ್ಷನ್ ಕುರಿತ ಚರ್ಚೆಗೆ ಕಾರಣವಿದೆ ಎಂದು ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ನ ಸಂಶೋಧಕಿ ಕ್ರಿಸ್ಟಿನಾ ಇವ್ಮಾರ್ಫಿಯಾ ಕಂಪಿಟ್ಸಿ ತಿಳಿಸಿದ್ದಾರೆ.

25 ಲಕ್ಷ ಮಕ್ಕಳ ಅಧ್ಯಯನ
ದ ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್ನಲ್ಲಿ ಪ್ರಕಟಿತ ಅಧ್ಯಯನದಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಸ್ವೀಡನ್ನಲ್ಲಿ 1982-89 ಮತ್ತು 1999-2015ರಲ್ಲಿ ಜನಿಸಿದ 25 ಲಕ್ಷ ಮಕ್ಕಳ ಮೆಡಿಕಲ್ ಬರ್ತ್ ರಿಜಿಸ್ಟರ್ನ ಮಾಹಿತಿ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಆ ಪೈಕಿ 3.75 ಲಕ್ಷ ಅಂದರೆ ಶೇ.15.5 ಮಕ್ಕಳು ಸಿ-ಸೆಕ್ಷನ್ನಿಂದ ಜನಿಸಿದ್ದು, ಅವರಲ್ಲಿ 1,495 ಮಂದಿ ನಂತರ ರಕ್ತ ಹಾಗೂ ಅಸ್ಥಿಮಜ್ಜೆಯನ್ನು ಬಾಧಿಸುವ ಕ್ಯಾನ್ಸರ್ ಆದ ಲ್ಯುಕೆಮಿಯಾಗೆ ಒಳಗಾಗಿದ್ದರು. ಒಟ್ಟಾರೆ ಸಿ-ಸೆಕ್ಷನ್ನಿಂದ ಜನಿಸಿದ ಶೇ.7ರಷ್ಟು ಮಕ್ಕಳು ಸಹಜ ಹೆರಿಗೆಯಾದ ಮಕ್ಕಳಿಗೆ ಹೋಲಿಸಿದರೆ ಲ್ಯುಕೆಮಿಯಾಗೆ ಒಳಗಾಗಿರುವ ಸಾಧ್ಯತೆ ಅಧಿಕವಾಗಿರುವುದು ಕಂಡುಬಂದಿದೆ. ಅದರಲ್ಲೂ ತುರ್ತು ಸಿಜೇರಿಯನ್ಗೆ ಹೋಲಿಸಿದರೆ ಯೋಜಿತ ಸಿ-ಸೆಕ್ಷನ್ನಲ್ಲಿ ಹುಟ್ಟಿದ ಮಕ್ಕಳು ಲ್ಯುಕೆಮಿಯಾಗೆ ಒಳಗಾಗುವ ಸಾಧ್ಯತೆ ಶೇ.21ರಷ್ಟು ಅಧಿಕ ಎಂದು ಈ ಅಧ್ಯಯನ ತಿಳಿಸಿದೆ.
