ಅಡುಗೆ ಎಣ್ಣೆಯಿಂದ ಹಾರಲಿರುವ ವಿಮಾನ – ಅಂತರರಾಷ್ಟ್ರೀಯ ಮಾನ್ಯತೆ

ನವದೆಹಲಿ:ಅಡುಗೆ ಎಣ್ಣೆಯನ್ನ (Cooking Oil) ಸಾಮಾನ್ಯವಾಗಿ ಮನೆಗಳಲ್ಲಿ ಆಹಾರ ತಯಾರಿಸಲು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಬಳಕೆ ಮಾಡಲಾಗುತ್ತದೆ, ಉಳಿದ ಎಣ್ಣೆಯನ್ನ ಅನೇಕ ಜನರು ಬಿಸಾಕುತ್ತಾರೆ. ಆದರೆ ಇದೀಗ ಇಂಡಿಯನ್ ಆಯಿಲ್ ಕಾರ್ಪೋರೇಷನ್ (Indian Oil Corporation) ಈ ಎಣ್ಣೆಯಿಂದ ಸುಸ್ಥಿರ ವಾಯುಯಾನ ಇಂಧನ (SAF) ತಯಾರಿಸಲು ಸಜ್ಜಾಗಿದ್ದು, ಇದರ ಉತ್ಪಾದನೆಗೆ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ಐಎಸ್‌ಸಿಸಿ ಕೊರ್ಸಿಯಾ ಪ್ರಮಾಣೀಕರಣವನ್ನು ಪಡೆದಿದೆ ಎಂದು ಕಂಪನಿಯ ಅಧ್ಯಕ್ಷ ಅರವಿಂದರ್ ಸಿಂಗ್ ಸಾಹ್ನಿ ಹೇಳಿದ್ದಾರೆ.
ದೇಶದಲ್ಲಿಯೇ ಮೊದಲ ಕಂಪನಿ
ಇನ್ನು ಈ ರೀತಿ SAF ಉತ್ಪಾದನೆಗೆ ಪ್ರಮಾಣೀಕರಣ ಪಡೆದ ದೇಶದ ಮೊದಲ ಕಂಪನಿ ಇದಾಗಿದ್ದು, ಇದು ಅತಿದೊಡ್ಡ ಸಾಧನೆ ಎಂದು ಅರವಿಂದರ್ ಸಿಂಗ್ ಸಾಹ್ನಿ ಹೇಳಿದ್ದಾರೆ. ಇನ್ನು SAF ಎಂದರೆ ಪೆಟ್ರೋಲಿಯಂ ರಹಿತ ಫೀಡ್‌ಸ್ಟಾಕ್‌ನಿಂದ ತಯಾರಾಗುವ ಪರ್ಯಾಯವಾದ ಇಂಧನವಾಗಿದ್ದು, ಇದನ್ನ ಬಳಕೆ ಮಾಡುವುದರಿಂದ ವಾಯು ಸಾರಿಗೆಯಿಂದ ಹೊರಗೆ ಹೋಗುವ ಕಾರ್ಬನ್ ಮಟ್ಟವನ್ನ ಬಹಳಷ್ಟು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ಇದರ ಲಭ್ಯತೆಯನ್ನು ಅವಲಂಬಿಸಿ ಇದನ್ನ ವಾಯುಯಾನ ಟರ್ಬೈನ್ ಇಂಧನದಲ್ಲಿ ಶೇಕಡಾ 50 ರಷ್ಟು ಮಿಶ್ರಣ ಮಾಡಬಹುದಾಗಿದೆ. ಈಗಾಗಲೇ 2027ರಿಂದ ಭಾರತದಲ್ಲಿ ಜೆಟ್ ಇಂಧನಗಳಲ್ಲ ಶೇ.1 ರಷ್ಟು SAF ಮಿಶ್ರಣ ಮಾಡುವುದನ್ನ ಕಡ್ಡಾಯ ಮಾಡಲಾಗಿದೆ.

ಹರಿಯಾಣದ ಘಟಕದಲ್ಲಿ ಉತ್ಪಾದನೆ
ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಹರಿಯಾಣದಲ್ಲಿರುವ ಇಂಡಿಯನ್ ಆಯಿಲ್‌ನ ಪಾಣಿಪತ್ ಸಂಸ್ಕರಣಾಗಾರದಲ್ಲಿ ಈ ಇಂಧನವನ್ನ ಉತ್ಪಾದನೆ ಮಾಡಲಾಗುತ್ತದೆ. ಏಕೆಂದರೆ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ISCC CORSIA ಪ್ರಮಾಣೀಕರಣವನ್ನು ಪಡೆದುಕೊಂಡಿದೆ ಎಂದು ಕಂಪನಿಯ ಅಧ್ಯಕ್ಷ ಅರವಿಂದರ್ ಸಿಂಗ್ ಸಾಹ್ನಿ ತಿಳಿಸಿದ್ದಾರೆ.
ಇನ್ನು ಹರಿಯಾಣದ ಈ ಸಂಸ್ಕರಣಾಗಾರವು ಈ ವರ್ಷದ ಅಂತ್ಯದಿಂದ ವರ್ಷಕ್ಕೆ ಸುಮಾರು 35,000 ಟನ್ SAF ಉತ್ಪಾದನೆ ಮಾಡಲು ಪ್ರಾರಂಭಿಸುತ್ತದೆ. 2027 ರಲ್ಲಿ ದೇಶಕ್ಕೆ ಕಡ್ಡಾಯವಾಗಿರುವ 1 ಪ್ರತಿಶತ ಇಂಧನ ಅಗತ್ಯವನ್ನು ಪೂರೈಸಲು ಉತ್ಪಾದನೆಯು ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಇಂಧನವನ್ನ ತಯಾರಿಸಲು ದೇಶದಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಬಳಕೆ ಮಾಡಿ ಬಿಸಾಕಲಾದ ಎಣ್ಣೆಯಿಂದ ತಯಾರಿಸಲಾಗುತ್ತದೆ. ದೊಡ್ಡ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ ಸರಪಳಿಗಳು ಸಾಮಾನ್ಯವಾಗಿ ಒಂದು ಬಾರಿ ಬಳಸಿದ ನಂತರ ಅಡುಗೆ ಎಣ್ಣೆಯನ್ನು ಬಳಕೆ ಮಾಡುವುದಿಲ್ಲ. ಅವುಗಳು ನಮಗೆ ಸಹಾಯವಾಗುತ್ತದೆ. ಮುಖ್ಯವಾಗಿ ರೆಸ್ಟೋರೆಂಟ್ ಹಾಗೂ ಹಳದಿ ರಾಮ್ ರೀತಿಯ ಹೋಟೆಲ್ ಚೈನ್‌ಗಳು ಹರಿಯಾಣದ ಘಟಕಕ್ಕೆ ಈ ಎಣ್ಣೆಗಳನ್ನ ಪೂರೈಕೆ ಮಾಡುತ್ತವೆ ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಇನ್ನು ಈ ರೀತಿಯ ಎಣ್ಣೆಗಳು ದೇಶದಲ್ಲಿ ಆರಾಮವಾಗಿ ಸಿಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಿಂದ ಎಣ್ಣೆ ಸಂಗ್ರಹ ಮಾಡುವುದು ಸುಲಭ,, ಆದರೆ ಮನೆಗಳಿಂದ ಇದನ್ನ ಸಂಗ್ರಹ ಮಾಡುವುದು ಸ್ವಲ್ಪ ಕಷ್ಟ. ಹಾಗಾಗಿ ಇದಕ್ಕೆ ಒಂದು ಸೂಕ್ತವಾದ ವ್ಯವಸ್ಥೆ ಮಾಡಬೇಕಾಗುತ್ತದೆ.