ಲಂಡನ್ ಸೌತ್ಎಂಡ್ ವಿಮಾನ ನಿಲ್ದಾಣದಲ್ಲಿ ವಿಮಾನ ಪತನ: ಭಾರಿ ಬೆಂಕಿ, ಸ್ಫೋಟದ ವಿಡಿಯೋ ವೈರಲ್!

ಲಂಡನ್: ಯುಕೆ ಪ್ರಮುಖ ನಗರ ಲಂಡನ್ನ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೆ ಸಣ್ಣ ಪ್ರಯಾಣಿಕ ವಿಮಾನವೊಂದು ಅಪಘಾತಕ್ಕೀಡಾಗಿದೆ. ನಿಲ್ದಾಣದ ತುಸು ದೂರದಲ್ಲಿಯೇ ಅಪಘಾತವಾಗಿದ್ದು, ವಿಮಾನ ಸ್ಪೋಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವನು ಸೌತೆಂಡ್ನಿಂದ ನೆದರ್ಲ್ಯಾಂಡ್ಸ್ನ ಲೆಲಿಸ್ಟಾಡ್ಗೆ ಹೋಗುತ್ತಿತ್ತು. ಬೀಚ್ ಬಿ200 ಮಾದರಿಯದ್ದಾಗಿದೆ. ತುರ್ತು ಸೇವೆಗಳು ಸ್ಥಳಕ್ಕೆ ಆಗಮಿಸಿದ್ದು, ವಿವಿಧ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. (ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನ)
ಸಾವು ಅಥವಾ ಗಾಯಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಘಟನಾ ಪ್ರದೇಶದಿಂದ ದೂರವಿರಬೇಕೆಂದು ರಕ್ಷಣಾ ಸಿಬ್ಬಂದಿ, ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಸೌತ್ಎಂಡ್ನ ಸಮಯದಲ್ಲಿ ಮಧ್ಯಾಹ್ನ 4 ಗಂಟೆಗೆ ಈ ಘಟನೆ ಸಂಭವಿಸಿದೆ.
ವಿಮಾನ ನಿಲ್ದಾಣದಲ್ಲಿ ತಮ್ಮ ಕುಟುಂಬದೊಂದಿಗೆ ಇದ್ದ ಜಾನ್ ಜಾನ್ಸನ್ ಎಂಬುವವರು ಈ ಘಟನೆಯನ್ನು ಕಣ್ಣಾರೆ ಕಂಡಿದ್ದಾರೆ. ವಿಮಾನವು “ನೆಲಕ್ಕೆ ತಲೆಕೆಳಗಾಗಿ ಅಪ್ಪಳಿಸಿದ ನಂತರ ದೊಡ್ಡ ಬೆಂಕಿಯ ಚೆಂಡು” ಕಾಣಿಸಿಕೊಂಡಿತು ಎಂದು ಅವರು ಹೇಳಿದ್ದಾರೆ. ಜಾನ್ಸನ್ ಮತ್ತು ಅವರ ಕುಟುಂಬದವರು ವಿಮಾನ ಅಪಘಾತವಾಗುವ ಮೊದಲು ಪೈಲಟ್ಗಳಿಗೆ ಕೈ ಬೀಸಿದರು. “ಅವರೆಲ್ಲರೂ ನಮಗೆ ಕೈ ಬೀಸಿದರು” ಎಂದು ಅವರು ನೆನಪಿಸಿಕೊಂಡಿದ್ದಾರೆ..
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನವು ಟೇಕಾಫ್ ಆದ ಮೂರು ಅಥವಾ ನಾಲ್ಕು ಸೆಕೆಂಡುಗಳ ನಂತರ, ಎಡಕ್ಕೆ ವಾಲಲು ಪ್ರಾರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ ತಲೆಕೆಳಗಾಗಿ ನೆಲಕ್ಕೆ ಅಪ್ಪಳಿಸಿತು.
