ಹಸಿದ ಸಿಂಹದ ಜೊತೆ ಫೋಟೋ ಸಾಹಸ: ಪವಾಡವೆಂಬಂತೆ ಪಾರಾದ ಯುವಕ

ಗಾಂಧಿನಗರ: ಯುವಕನೊಬ್ಬ ಹುಚ್ಚು ಸಾಹಸಕ್ಕೆ ಕೈ ಹಾಕಿ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವಂತಹ ಘಟನೆಯೊಂದು ನಡೆದಿದೆ. ಯುವಕ ಹಸಿದ ಸಿಂಹದ (Lion) ಬಳಿ ಹೋಗಿ ಫೋಟೋ ಕ್ಲಿಕ್ಕಿಸಿದ್ದು, ಪವಾಡವೆಂಬಂತೆ ಪಾರಾಗಿದ್ದಾನೆ. ಯುವಕನ ಹುಚ್ಚುತನಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ
ಈ ಘಟನೆ ಗುಜರಾತ್‌ನ (Gujarat) ಭಾವನಗರದಲ್ಲಿ (Bhavnagar) ನಡೆದಿದೆ. ಇತ್ತೀಚೆಗೆ ತಲಿ ಗ್ರಾಮದ ಯುವಕನೊಬ್ಬ ಸಿಂಹದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಅದರಲ್ಲಿ ಸಿಂಹವೊಂದು ತಾನು ಬೇಟೆಯಾಡಿದ ಪ್ರಾಣಿಯನ್ನು ಭಕ್ಷಿಸುತ್ತಿದ್ದಾಗ ಅದರ ಹತ್ತಿರ ಹೋಗಿ ಯುವಕ ಫೋಟೋ ಕ್ಲಿಕ್ಕಿಸಿದ್ದಾನೆ. ಮೊದಲೇ ಹಸಿದಿದ್ದ ಸಿಂಹ ಮತ್ತೊಂದು ಬೇಟೆ ಸಿಕ್ಕಿತೆಂದು ಯುವಕನ ಬಳಿ ಹೆಜ್ಜೆ ಹಾಕಿದೆ. ಆಗ ಯುವಕ ಹಿಂದೆ ಸರಿದು, ಅದೃಷ್ಟವಶಾತ್ ಸಿಂಹದ ಆಹಾರವಾಗುವುದರಿಂದ ತಪ್ಪಿಸಿಕೊಂಡಿದ್ದಾನೆ.

ಇದೆಲ್ಲದರ ವಿಡಿಯೋವನ್ನು ಅಲ್ಲೇ ದೂರದಲ್ಲಿ ನೋಡುತ್ತಿದ್ದ ಇತರ ಯುವಕರು ಸೆರೆಹಿಸಿಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಅರಣ್ಯ ಇಲಾಖೆ ಘಟನೆ ಬಗ್ಗೆ ತನಿಖೆ ಆರಂಭಿಸಿದೆ. ಸಿಂಹದ ತಾಳ್ಮೆ ಪರೀಕ್ಷಿಸಿದ ಯುವಕನನ್ನು ತಲಿ ಗ್ರಾಮದ ನಿವಾಸಿ ಎಂದು ಅರಣ್ಯ ಇಲಾಖೆ ಪತ್ತೆ ಮಾಡಿದೆ.
ವೈರಲ್ ಆಗಿರುವ ವಿಡಿಯೋ ಬಗ್ಗೆ ಮಾಹಿತಿ ನೀಡಿರುವ ಆರ್‌ಎಫ್‌ಒ ರಾಜು ಜಿಂಜುವಾಡಿಯಾ, ಈ ಘಟನೆ ತಲಿ ಮತ್ತು ಬಂಬೋರ್ ಗ್ರಾಮಗಳ ನಡುವೆ ನಡೆದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಸಿಂಹಕ್ಕೆ ತೊಂದರೆ ಮಾಡಿದ ಯುವಕನ ಹೆಸರು ಗೌತಮ್ ಶಿಯಾಲ್ ಎಂದು ಬೆಳಕಿಗೆ ಬಂದಿದೆ. ಎರಡನೇ ವಿಡಿಯೋ ಮಾಡಿದವರು ಯಾರು ಮತ್ತು ಗೌತಮ್ ಶಿಯಾಲ್ ವಿಡಿಯೋ ಅಪ್ ಲೋಡ್ ಮಾಡಿದಾಗ ಅದನ್ನು ವೈರಲ್ ಮಾಡಿದವರು ಯಾರು ಎಂಬುದರ ಬಗ್ಗೆಯೂ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ ಎಂದಿದ್ದಾರೆ.
ಅರಣ್ಯ ಕಾನೂನಿನ ಪ್ರಕಾರ, ಗೌತಮ್ ಶಿಯಾಲ್ ನನ್ನು ವಿಚಾರಣೆಗೆ ಒಳಪಡಿಸಲಾಗುವುದು. ಮತ್ತು ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ತನಿಖೆಯ ಸಮಯದಲ್ಲಿ ಬೇರೆ ಯಾವುದೇ ವ್ಯಕ್ತಿಯ ಹೆಸರು ಬೆಳಕಿಗೆ ಬಂದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇನ್ನು ಪ್ರತ್ಯೇಕ ಘಟನೆಯಲ್ಲಿ ಸಾಕು ನಾಯಿಯೇ ಮಹಿಳೆಯ ಮೇಲೆ ದಾಳಿ ಮಾಡಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಅದರ ವಿಡಿಯೋ ಚರ್ಚೆಯನ್ನ ಹುಟ್ಟು ಹಾಕಿದೆ.
ಹರಿಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯ ಬಳಿ ಹಸ್ಕಿ ತಳಿಯ ನಾಯಿಯನ್ನ ಅದರ ಮಾಲಕಿ ಕರೆದುಕೊಂಡು ಬರುತ್ತಿದ್ದಾರೆ. ಅದೇ ಸಮಯದಲ್ಲಿ ಎದುರುಗಡೆಯಿಂದ ಇನ್ನೊಬ್ಬ ಮಹಿಳೆ ಸಹ ವಾಕಿಂಗ್ ಮಾಡಿಕೊಂಡು ಬರುತ್ತಿತ್ತಾರೆ. ಆಗ ಆ ನಾಯಿ ಏಕಾಏಕಿ ವಾಕಿಂಗ್ ಬರುತ್ತಿದ್ದ ಮಹಿಳೆಯ ಮೇಲೆ ದಾಳಿ ಮಾಡಿದೆ. ಆದರೆ ಅದೃಷ್ಟವಶಾತ್ ಅಲ್ಲಿ ವಾಕಿಂಗ್ ಮಾಡುತ್ತಿದ್ದ ಇತರ ಜನರು ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ ನಾಯಿ ದಾಳಿಯ ಕಾರಣದಿಂದ ಮಹಿಳೆಯ ಕೈಗೆ ಗಂಭೀರವಾದ ಗಾಯಗಳಾಗಿದೆ. ಇನ್ನು ಈ ಬಗ್ಗೆ ಅನೇಕ ಜನರು ಕಾಮೆಂಟ್ ಮಾಡುತ್ತಿದ್ದು, ನಾಯಿ ದಾಳಿಗಳ ಬಗ್ಗೆ ಸುರಕ್ಷತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.
