ಫೋನ್‌ಪೇ ಐಪಿಒಗೆ ಸಿದ್ಧತೆ: $1.5 ಬಿಲಿಯನ್ ಸಂಗ್ರಹದ ಗುರಿ, ಭಾರತೀಯ ಫಿನ್‌ಟೆಕ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು?

ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ವೇದಿಕೆ ಫೋನ್‌ಪೇ ಶೀಘ್ರದಲ್ಲೇ ಐಪಿಒ(IPO) ಮೂಲಕ ಷೇರು ಮಾರುಕಟ್ಟೆಗೆ ಪ್ರವೇಶಿಸಲಿದೆ.ಈ ಮೂಲಕ ಮತ್ತೊಂದು ಫಿನ್‌ಟೆಕ್ ಕಂಪನಿ ಷೇರು ಮಾರುಕಟ್ಟೆಗೆ ಲಗ್ಗೆ ಇಟ್ಟಂತಾಗುತ್ತದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಈ ಐಪಿಒ ಮೂಲಕ ಅಂದಾಜು 1.5 ಬಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸುವ ಗುರಿಯನ್ನು ಫೋನ್‌ಪೇ ಇಟ್ಟಿಕೊಂಡಿದೆ ಎಂದು ವರದಿಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.

ಹೌದು, ಡಿಜಿಟಲ್ ಪಾವತಿಯಲ್ಲಿ ಅತಿ ಹೆಚ್ಚು ಹೆಸರುವಾಸಿಯಾಗಿರುವ ಫೋನ್‌ಪೇವಾಲ್ ಮಾರ್ಟ್‌ನಿಂದ ಹೂಡಿಕೆ ಪಡೆದಿರುವ ಫೋನ್‌ಪೇ ಆಗಸ್ಟ್ ಆರಂಭದಲ್ಲಿ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಗೆ ಐಪಿಒಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.ಈ ವರ್ಷದ ಫೆಬ್ರವರಿಯಲ್ಲಿಯೇ ಕಂಪನಿಯು ಐಪಿಒಗೆ ಸಿದ್ಧತೆಗಳನ್ನು ಪ್ರಾರಂಭಿಸಿತ್ತು ಎಂದು ವರದಿಗಳು ಹೇಳಿವೆ.
ಫೋನ್‌ಪೇ ಬಳಕೆದಾರರು ಮತ್ತು ವಹಿವಾಟು
ಭಾರತದಲ್ಲಿ 2015 ರಲ್ಲಿ ಸ್ಥಾಪಿತವಾದ ಫೋನ್‌ಪೇ, ಪ್ರಸ್ತುತ 610 ದಶಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಪ್ರತಿದಿನ ಅಂದಾಜು 340 ಮಿಲಿಯನ್ ವಹಿವಾಟುಗಳನ್ನು ಈ ವೇದಿಕೆ ಮೂಲಕ ನಡೆಸಲಾಗುತ್ತದೆ. ಮೇ ತಿಂಗಳಲ್ಲಿ ಮಾತ್ರ, ಫೋನ್‌ಪೇ 12.56 ಲಕ್ಷ ಕೋಟಿ ರೂ. ಮೌಲ್ಯದ 8.68 ಬಿಲಿಯನ್ ವಹಿವಾಟುಗಳನ್ನು ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ದಾಖಲಿಸಿದೆ.

ಐಪಿಒ ಯಶಸ್ಸಿಗೆ ದೇಶೀಯ ಮತ್ತು ವಿದೇಶಿ ಬ್ಯಾಂಕ್‌ಗಳಿಂದ ನೆರವು
ಫೋನ್‌ಪೇ ತನ್ನ ಐಪಿಒ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ದೇಶೀಯ ಮತ್ತು ವಿದೇಶಿ ಬ್ಯಾಂಕ್‌ಗಳ ಸಹಾಯವನ್ನು ಪಡೆಯುತ್ತಿದೆ. ಕೋಟಕ್ ಮಹೀಂದ್ರಾ ಕ್ಯಾಪಿಟಲ್, ಜೆಪಿ ಮಾರ್ಗನ್ ಚೇಸ್, ಸಿಟಿಗ್ರೂಪ್ ಮತ್ತು ಮಾರ್ಗನ್ ಸ್ಟಾನ್ಲಿಯಂತಹ ಪ್ರಮುಖ ಬ್ಯಾಂಕುಗಳು ಹೂಡಿಕೆದಾರರಾಗಿ ಆಯ್ಕೆಯಾಗಿವೆ. ಈ ಬ್ಯಾಂಕುಗಳು ಸಾರ್ವಜನಿಕ ಕೊಡುಗೆ ಮತ್ತು ಷೇರು ಮಾರಾಟದಲ್ಲಿ ಹೂಡಿಕೆದಾರರಿಗೆ ನೆರವಾಗಲಿವೆ.
ಹಿಂದಿನ ಫಿನ್‌ಟೆಕ್ ಕಂಪನಿಗಳ ಸಾಧನೆ
ಭಾರತದಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ಫಿನ್‌ಟೆಕ್ ಕಂಪನಿ ಪೇಟಿಎಂ. ಆದರೆ, ಇದರ ಷೇರು ಬೆಲೆ ಗಣನೀಯವಾಗಿ ಕುಸಿತವನ್ನು ಸಹ ಕಂಡಿತ್ತು. ಕಳೆದ ವರ್ಷ ಡಿಸೆಂಬರ್ 2024ರಲ್ಲಿಪಟ್ಟಿಯಾದ ಮೊಬಿಕ್ವಿಕ್, ಆರಂಭದಲ್ಲಿ ಏರಿಕೆ ಕಂಡರೂ, ನಂತರ ಕುಸಿತವನ್ನು ಅನುಭವಿಸಿದೆ.
ಫೋನ್‌ಪೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 61 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಮತ್ತು 4 ಕೋಟಿಗೂ ಹೆಚ್ಚು ವ್ಯಾಪಾರಿಗಳನ್ನು ಒಳಗೊಂಡಿದೆ.
ಸಿಂಗಾಪುರದಿಂದ ಭಾರತಕ್ಕೆ 2022 ರಲ್ಲಿ ಫೋನ್‌ಪೇಯ ಸ್ಥಳಾಂತರವಾದ ಮೇಲೆ ವಾಲ್‌ಮಾರ್ಟ್ ನೇತೃತ್ವದ ಫೋನ್‌ಪೇ ಹೂಡಿಕೆದಾರರು ಭಾರತ ಸರ್ಕಾರಕ್ಕೆ ಸುಮಾರು 8,000 ಕೋಟಿ ರೂ. (ಸುಮಾರು 1 ಬಿಲಿಯನ್ ಯುಎಸ್ ಡಾಲರ್) ತೆರಿಗೆಯನ್ನು ಪಾವತಿ ಮಾಡಿದ್ದರು.
ಫೋನ್‌ಪೇ ತನ್ನ ಪ್ಲಾಟ್‌ಫಾರ್ಮ್ ಮೂಲಕ ಮೇ 2025 ವೇಳೆಗೆ 34 ಕೋಟಿಗೂ ಹೆಚ್ಚು ಪ್ರತಿನಿತ್ಯದ ವಹಿವಾಟುಗಳಿಂದ ಒಟ್ಟು 150 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಗಳಿಸಿದೆ.
ಫೋನ್‌ಪೇ ಐಪಿಒ ಯಶಸ್ವಿಯಾದರೆ, ಭಾರತೀಯ ಫಿನ್‌ಟೆಕ್ ಉದ್ಯಮದ ಇತಿಹಾಸದಲ್ಲಿಯೇ ಇದು ಅತಿದೊಡ್ಡ ಐಪಿಒ ಆಗುವ ಸಾಧ್ಯತೆಯಿದೆ ಇದೆ.
