ಮೃತಪಟ್ಟ ನಾಲ್ವರು ಅಮೆರಿಕನ್ ಸೈನಿಕರ ಹೆಸರು ಬಹಿರಂಗಪಡಿಸಿದ ಪೆಂಟಗನ್

ವಾಷಿಂಗ್ಟನ್: ಇರಾನ್ ಜತೆಗಿನ ಸಂಘರ್ಷದ ವೇಳೆ ಕುವೈತ್ನಲ್ಲಿ ನಡೆದ ಡೋನ್ ದಾಳಿಯಲ್ಲಿ ಮೃತಪಟ್ಟ ಆರು ಅಮೆರಿಕನ್ ಸೈನಿಕರ ಪೈಕಿ ನಾಲ್ವರ ಹೆಸರನ್ನು ಅಮೆರಿಕ ಬಹಿರಂಗಪಡಿಸಿದೆ. ಎಲ್ಲ ನಾಲ್ವರು ಸಂತ್ರಸ್ತರು ಸೇನೆಯ ಮೀಸಲು ಸೈನಿಕರಾಗಿದ್ದು, ಲೋವಾದ ಡೆಸ್ ಮೊನಿಸ್ 103ನೇ ಸಸ್ಟೈನ್ನೆಂಟ್ ಕಮಾಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಸ್ಪಷ್ಟಪಡಿಸಿದೆ.
ಪೋರ್ಟ್ ಶುಲೈಬಾ ಕಮಾಂಡ್ ಸೆಂಟರ್ ಮೇಲೆ ಡೋನ್ ಅಪ್ಪಳಿಸಿ ಇವರು ಮೃತಪಟ್ಟಿದ್ದಾಗಿ ಪೆಂಟಗಾನ್ ದೃಢಪಡಿಸಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ಆರಂಭಿಸುವ ಘೋಷಣೆ ಮಾಡಿದ ಮರುದಿನವೇ ಇರಾನ್ ಈ ಪ್ರತಿದಾಳಿ ನಡೆಸಿತ್ತು. ಇದರಲ್ಲಿ ಫ್ಲೋರಿಡಾ ವಿಂಟರ್ ಹೆವನ್ ನ ಕ್ಯಾಪ್ಟನ್ ಕೋಡಿ ಎ ಖೋರ್ಕ್ (35), ನೆರ್ಬಸ್ಕಾ ಬೆಲ್ಲೆವ್ಯೂನ ಫಸ್ಟ್ ಕ್ಲಾಸ್ ಸಾರ್ಜೆಂಟ್ ನೋಹ್ ಎಲ್ ಟೈಟೆನ್ಸ್ (42), ಮಿನ್ನೆಸೊಟಾ ವೈಟ್ ಬೀರ್ ಲೇಕ್ನ ಫಸ್ಟ್ ಕ್ಲಾಸ್ ಸಾರ್ಜೆಂಟ್ ನಿಕೋಲ್ ಎಂ ಅಮೋರ್ (39) ಮತ್ತು ಲೋವಾ ವೆಸ್ಟ್ ಡೇಸ್ ಮೊನಿಸ್ ನ ಪರಿಣತ ಡಿಕ್ಲೀನ್ ಜೆ ಕವೋಡಿ (20) ಎಂದು ಗುರುತಿಸಲಾಗಿದೆ.

ಯುದ್ಧದಲ್ಲಿ ಇರಾನ್ ನ 2000 ನೆಲೆಗಳ ಮೇಲೆ ಅಮೆರಿಕನ್ ಪಡೆಗಳು ದಾಳಿ ನಡೆಸಿವೆ ಎಂದು ಅಮೆರಿಕ ಪ್ರಕಟಿಸಿದೆ. ಅಪಾಯವನ್ನು ನಿರ್ಮೂಲನೆ ಮಾಡುವ ಸಲುವಾಗಿ ಈ ದಾಳಿ ನಡೆಸುತ್ತಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಆದರೆ ಈ ಸಂಘರ್ಷ ಹೇಗೆ ಕೊನೆಗೊಳ್ಳುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಅಮೆರಿಕನ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ದೇಶದ ಭದ್ರತೆಯನ್ನು ರಕ್ಷಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೌದಿ ಅರೇಬಿಯಾ ಬುಧವಾರ ಘೋಷಿಸಿದೆ. ದೇಶದ ಭದ್ರತೆ, ಭೂಪ್ರದೇಶ ಮತ್ತು ನಾಗರಿಕರ ರಕ್ಷಣೆಗೆ ಬದ್ಧ ಎಂದು ಸ್ಪಷ್ಟಪಡಿಸಿದೆ. ಇರಾನ್ ನ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ಎಲ್ಲ ಹಕ್ಕು ಸೌದಿ ಅರೇಬಿಯಾಗೆ ಇದೆ ಎಂದು ಸಂಪುಟ ಪ್ರಕಟಣೆ ಹೇಳಿದೆ.