ನೆಲದಲ್ಲಿ ರಸ್ತೆಬದಿಯಲ್ಲಿ ಡ್ರಗ್ಸ್ ಹೂತಿಟ್ಟು ಮಾರಾಟಕ್ಕೆ ಲೊಕೇಶನ್ ಕಳಿಸುತ್ತಿದ್ದ ಪೆಡ್ಲರ್

ಬೆಂಗಳೂರು:ಸೋಲದೇವನಹಳ್ಳಿ ಹಾಗೂ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದರ ನಡುವೆಯೇ ರಸ್ತೆ ಬದಿ ಡ್ರಗ್ಸ್ ಗಾಗಿ ಹುಡುಕಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕುದುರೆಗೆರೆಯ ಓಂಸಾಯಿ ಬಡಾವಣೆಯಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ರಸ್ತೆ ಬದಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಏನನ್ನೋ ಹುಡುಕಾಡುತ್ತಿದ್ದ.. ಇದನ್ನ ಗಮನಿಸಿದ ಸ್ಥಳೀಯರು ಬಂದು ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಲು ಚಡಪಡಿಸಿದ್ದಾನೆ..
ವ್ಯಕ್ತಿ ನಡವಳಿಕೆ ಸಂದೇಹಪಟ್ಟ ಸ್ಥಳೀಯರು ಆತನನ್ನು ಹಿಡಿದು ಮೊಬೈಲ್ ವಶಕ್ಕೆ ಪಡೆದು ಪ್ರಶ್ನಿಸಿದಾಗ, ನಾನೊಬ್ಬ ಡ್ರಗ್ಸ್ ವ್ಯಸನಿ, ಈ ಹಿಂದೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದೆ. ಇಲ್ಲಿ ಡ್ರಗ್ಸ್ ಇದೆ ಎಂದು ಹೇಳಿದ್ದರು.ಹಾಗಾಗಿ ಹುಡುಕುತ್ತಿದ್ದೆ ಎಂದು ಹೇಳಿದ್ದಾನೆ.

ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ಮೊಬೈಲ್ ಪರಿಶೀಲನೆ ನಡೆಸಿದಾಗ, ನೈಜೀರಿಯಾ ಮೂಲದ ಪ್ರಜೆಯೋರ್ವ 1500 ರೂಪಾಯಿಗೆ ಡ್ರಗ್ಸ್ ಅನ್ನು ಬಚ್ಚಿಟ್ಟು ಈತನಿಗೆ ತೆಗೆದುಕೊಳ್ಳುವಂತೆ ಹೇಳಿದ್ದ ಎಂದು ಗೊತ್ತಾಗಿದೆ.
ಡ್ರಗ್ಸ್ ಇರುವ ಸ್ಥಳದ ಫೋಟೋ ಹಾಗೂ ಲೊಕೇಶನ್ ಆಧರಿಸಿ ವ್ಯಕ್ತಿ ಹುಡುಕಾಟ ನಡೆಸುತ್ತಿದ್ದ ಎಂದು ಈ ವೇಳೆ ಗೊತ್ತಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮೊಬೈಲ್ ಹಾಗೂ ಬೈಕ್ ಅನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ ಡ್ರಗ್ ಪೆಡ್ಲರ್ ಯಾರು ಎಂದು ವಿಚಾರಣೆ ನಡೆಸಲಾಗುತ್ತಿದೆ.
