ಸಮುದ್ರದಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್ ಪತನ; ಏಳು ಮಂದಿ ಪ್ರಯಾಣಿಕರು ಸುರಕ್ಷಿತ

ಪೋರ್ಟ್ ಬ್ಲರ್: ಕೇಂದ್ರ ಅಂಡಮಾನ್ ದ್ವೀಪದ ಉತ್ತರ ಭಾಗದಲ್ಲಿರುವ ಪೋರ್ಟ್ ಬೇರ್ ನಿಂದ ಟೇಕಫ್ ಆದ ಕೆಲವೇ ಕ್ಷಣಗಳಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿರುವ ಬಗ್ಗೆ ವರದಿಯಾಗಿದೆ. ಈ ಹೆಲಿಕಾಪ್ಟರ್ ನಲ್ಲಿದ್ದ ಏಳು ಮಂದಿ ಪ್ರಯಾಣಿಕರು ಕೂಡ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.
ನ್ಯಾಷನಲ್ ಚಾಪರ್ ಕ್ಯಾರಿಯರ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ 9.30ಕ್ಕೆ ಪತನಗೊಂಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಮಾಯಾಬಂದರ್ ಬಳಿ ಕೊಂಚ ದೂರದಲ್ಲಿ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ಪವನ್ ಹನ್ಸ್ ವಕ್ತಾರರು ತಿಳಿಸಿದ್ದಾರೆ.


ಇಬ್ಬರು ಸಿಬ್ಬಂದಿಗಳು ಹಾಗೂ ಐವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪೋರ್ಟ್ ಬ್ಲರ್ ನಿಂದ ಹಾರಾಟ ಕೈಗೊಂಡಿತ್ತು. ಎಲ್ಲರನ್ನೂ ರಕ್ಷಿಸಲಾಗಿದ್ದು, ಅವರೆಲ್ಲರೂ ಸುರಕ್ಷಿತರಾಗಿದ್ದಾರೆ. ಯಾವುದೇ ಗಾಯಾಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಸುಮಾರು 9.30 ಗಂಟೆಗೆ ಮಾಯಾಬಂದರ್ ನಲ್ಲಿ ಭೂಸ್ಪರ್ಶ ಮಾಡಬೇಕಿದ್ದ ಹೆಲಿಕಾಪ್ಟರ್ ರನ್ ವೇಗಿಂತ 300 ಮೀಟರ್ ದೂರದಲ್ಲಿ ಸಮುದ್ರಕ್ಕೆ ಪತನಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್ ನ ಛಾತ್ರಾದಲ್ಲಿ ಏರ್ ಆ್ಯಂಬುಲೆನ್ಸ್ ವಿಮಾನ ಪತನಗೊಂಡ ಬೆನ್ನಲ್ಲೆ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಎಲ್ಲಾ 7 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.