ಲ್ಯಾಬ್ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ರೋಗಿಗಳ ಪರದಾಟ; ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ರಕ್ತ, ಕಫ ವರದಿ

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿರುವ ಕಿಮ್ಸ್ ಆಸ್ಪತ್ರೆ, ಕರ್ನಾಟಕದ ಎರಡನೇ ಅತಿ ಹಳೆಯ ಸರ್ಕಾರಿ ಆಸ್ಪತ್ರೆ. ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲಿಯೇ ಅತಿ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಕೇವಲ ಧಾರವಾಡ ಜಿಲ್ಲೆ ಮಾತ್ರವಲ್ಲ, ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಿಂದ ಪ್ರತಿನಿತ್ಯ ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂದು ನಂಬಿ ಬರುವ ರೋಗಿಗಳಿಗೆ ಇದೀಗ ಲ್ಯಾಬ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಪರದಾಡುವಂತಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಿಂದ ಅಕ್ಟೋಬರ್ 8 ರಂದು ಕಿರಣಕುಮಾರ್ ಎಂಬ ಬಾಲಕ ಕೆಮ್ಮು ಮತ್ತು ಜ್ವರದ ಚಿಕಿತ್ಸೆಗಾಗಿ ಕಿಮ್ಸ್ಗೆ ಬಂದಿದ್ದ. ವೈದ್ಯರು ಆತನಿಗೆ ಕಫದ ಪರೀಕ್ಷೆ ಮಾಡಿಸುವಂತೆ ಹೇಳಿದ್ದರು. ಹೀಗಾಗಿ ಕಿಮ್ಸ್ನಲ್ಲಿಯೇ ಇರುವ ಲ್ಯಾಬ್ಗೆ ಕಫದ ಮಾದರಿಯನ್ನು ನೀಡಿದ್ದ. ಮೂರು ದಿನದಲ್ಲಿ ವರದಿ ನೀಡುವುದಾಗಿ ಸಿಬ್ಬಂದಿ ಹೇಳಿದ್ದರು. ಮೂರು ದಿನ ಬಿಟ್ಟು ಬಂದಾಗ ಇನ್ನೂ ವರದಿ ಬಂದಿಲ್ಲ ಎಂದಿದ್ದಾರೆ. ಮತ್ತೆರಡು ದಿನ ಬಿಟ್ಟು ಬಂದಾಗಲು ರಿಪೋರ್ಟ್ ಬಂದಿಲ್ಲಾ ಎಂದಿದ್ದಾರೆ. ಇದಾದ ನಂತರ ಮತ್ತೆ ಹೆತ್ತವರ ಜೊತೆ ಬಾಲಕ ಬಂದಾಗ, ‘ನೀನು ನೀಡಿದ ಸ್ಯಾಂಪಲ್ಸ್ ಕಳೆದಿದೆ. ಹೀಗಾಗಿ ರಿಪೋರ್ಟ್ ಇಲ್ಲ. ಮತ್ತೊಮ್ಮೆ ಸ್ಯಾಂಪಲ್ ಕೊಟ್ಟು ಹೋಗಿ’ ಎಂದಿದ್ದಾರೆ. ಇದು ಬಾಲಕನ ತಂದೆಯ ಆಕ್ರೋಶಕ್ಕೆ ಕಾರಣವಾಗಿದೆ. ಬಡವರೇ ಹೆಚ್ಚಾಗಿ ಕಿಮ್ಸ್ಗೆ ಬರುತ್ತಾರೆ. ಆದರೆ, ಇಲ್ಲಿ ಬಡವರ ಜೊತೆ ಲ್ಯಾಬ್ ಸಿಬ್ಬಂದಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಗಿಗಳು ನೀಡುವ ರಕ್ತ ಮತ್ತು ಕಫ ಸೇರಿದಂತೆ ವಿವಿಧ ಸ್ಯಾಂಪಲ್ಸ್ಗಳನ್ನು ಲ್ಯಾಬ್ ಸಿಬ್ಬಂದಿ ಸರಿಯಾಗಿ ಸಂಗ್ರಹಿಸದೇ ನಿರ್ಲಕ್ಷ್ಯ ವಹಿಸುವುದು ಇದು ಮೊದಲೇನಲ್ಲ. ಪ್ರತಿನಿತ್ಯ ಈ ರೀತಿಯ ಘಟನೆಗಳು ಹುಬ್ಬಳ್ಳಿ ಕಿಮ್ಸ್ನಲ್ಲಿ ನಡೆಯುತ್ತಲೇ ಇರುತ್ತವೆ. ಸ್ಯಾಂಪಲ್ಸ್ಗಳನ್ನು ಸರಿಯಾಗಿ ಸಂಗ್ರಹಿಸಿಡದೇ ಇರುವುದರಿಂದ ಅವು ಕಸದ ಬುಟ್ಟಿಗೆ ಹೋಗುತ್ತಿವೆ. ರಿಪೋರ್ಟ್ ಕೇಳಲು ಬಂದಾಗ ನಿಜ ಹೇಳದೆ ಮೊದಲು ಎರಡ್ಮೂರು ಸಲ ಅಡ್ಡಾಡಿಸುತ್ತಾರೆ. ನಂತರ ಸ್ಯಾಂಪಲ್ಸ್ ಕಳೆದಿದೆ, ಮತ್ತೊಮ್ಮೆ ನೀಡಿ ಎನ್ನುತ್ತಾರೆ.
ಹುಬ್ಬಳ್ಳಿ ಕಿಮ್ಸ್ನಲ್ಲಿ ಲ್ಯಾಬ್ ನಿರ್ವಹಣೆಯನ್ನು ಖಾಸಗಿ ಏಜನ್ಸಿಗೆ ನೀಡಲಾಗಿದೆ. ಪ್ರತಿ ಪರೀಕ್ಷೆಗೆ ಇಂತಿಷ್ಟು ಹಣ ಎಂದು ಕಿಮ್ಸ್ ನೀಡುತ್ತದೆ. ಆದರೆ, ಗುತ್ತಿಗೆ ಪಡೆದಿರುವ ಏಜನ್ಸಿ ಸಿಬ್ಬಂಧಿ ನಿರ್ಲಕ್ಷ್ಯ ವಹಿಸುತ್ತಿರುವದರಿಂದ ರೋಗಗಳು ಸಕಾಲದಲ್ಲಿ ರಿಪೋರ್ಟ್ ಸಿಗದೇ ಪರದಾಡುವಂತಾಗಿದೆ.