ವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ಪತಂಜಲಿ ಆಚಾರ್ಯ ಬಾಲಕೃಷ್ಣ

ನವದೆಹಲಿ: ಪತಂಜಲಿ ಸಹ-ಸಂಸ್ಥಾಪಕರಾದ ಆಚಾರ್ಯ ಬಾಲಕೃಷ್ಣ (Acharya Balkrishna) ಅವರು ವಿಶ್ವದ ಶೇ. 2 ಅಗ್ರಮಾನ್ಯ ವಿಜ್ಞಾನಿಗಳ ಸಾಲಿಗೆ ಸೇರಿದ್ದಾರೆ. ಎಲ್ಸೆವಿಯರ್ (Elsevier) ಸಹಯೋಗದಲ್ಲಿ ಅಮೆರಿಕದ ಸ್ಟಾನ್ಫೋರ್ಡ್ ಯೂನಿವರ್ಸಿಟಿಯ (Stanford University) ರಿಸರ್ಚ್ ಗ್ರೂಪ್ವೊಂದು, ಜಾಗತಿಕವಾಗಿರುವ ಅಗ್ರಮಾನ್ಯ ವಿಜ್ಞಾನಿಗಳು ಹಾಗೂ ಸಂಶೋಧಕರ ಪಟ್ಟಿಯೊಂದನ್ನು ಮಾಡಿದೆ. ಇದರಲ್ಲಿ ಆಚಾರ್ಯ ಬಾಲಕೃಷ್ಣ ಅವರ ಹೆಸರೂ ಸೇರಿದೆ.

ಆಚಾರ್ಯ ಬಾಲಕೃಷ್ಣ ಅವರಿಗೆ ಸಿಕ್ಕಿರುವ ಈ ಮಾನ್ಯತೆಯು ಪತಂಜಲಿ ಸಂಸ್ಥೆಗೆ ಮಾತ್ರವಲ್ಲ, ಆಯುರ್ವೇದ ವಿಜ್ಞಾನಕ್ಕೆ ಸಿಕ್ಕ ಒಂದು ಗೌರವ ಹಾಗೂ ದೇಶಕ್ಕೂ ಸಿಕ್ಕ ಒಂದು ಹೆಮ್ಮೆ ಎಂದು ಭಾವಿಸಲಾಗಿದೆ.
ಆಚಾರ್ಯ ಬಾಲಕೃಷ್ಣ ಅವರು ಭಾರತದ ಪ್ರಾಚೀನ ಆಯುರ್ವೇದ ತತ್ವದೊಂದಿಗೆ ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಯನ್ನು ಮೇಳೈಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ನಾವೀನ್ಯತೆಯನ್ನೊಳಗೊಂಡಿರುವ ಅವರ ಸಂಶೋಧನಾ ಕಾರ್ಯಕ್ಕೆ ಜಾಗತಿಕವಾಗಿ ವಿಜ್ಞಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಗಿಡಮೂಲಿಕೆಗಳು ಹಾಗೂ ಸಾಂಪ್ರದಾಯಿಕ ಔಷಧಗಳ ಉಪಯುಕ್ತತೆ ಬಗ್ಗೆ ಅನ್ವೇಷಣೆ ಮಾಡಲು ಇತರ ವಿಜ್ಞಾನಿಗಳಿಗೆ ಆಚಾರ್ಯ ಬಾಲಕೃಷ್ಣರು ಪ್ರೇರಣೆ ನೀಡಿದ್ದಾರೆ.
ವಿವಿಧ ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ ಆಚಾರ್ಯ ಬಾಲಕೃಷ್ಣ ಅವರು ಬರೆದ 300ಕ್ಕೂ ಹೆಚ್ಚು ರಿಸರ್ಚ್ ಆರ್ಟಿಕಲ್ಗಳು ಮುದ್ರಣ ಕಂಡಿವೆ. ಅವರ ಮಾರ್ಗದರ್ಶನದಲ್ಲಿ ಪತಂಜಲಿ ಸಂಸ್ಥೆ ನೂರಕ್ಕೂ ಹೆಚ್ಚು ಸಾಕ್ಷ್ಯ ಆಧಾರಿತ ಆಯುರ್ವೇದ ಔಷಧಗಳನ್ನು ಅಭಿವೃದ್ಧಿಪಡಿಸಿದೆ. ಆಲೋಪಥಿ ಔಷಧ ವಿಧಾನಕ್ಕೆ ಪತಂಜಲಿ ಪರ್ಯಾಯವಾದ ನೈಸರ್ಗಿಕ ವಿಧಾನದ ಔಷಧಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದೆ.
ಆಚಾರ್ಯರು ಸಂಶೋಧನೆ ಮಾತ್ರವಲ್ಲ, ಯೋಗ ಮತ್ತು ಆಯುರ್ವೇದದ ಬಗ್ಗೆ 120ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆಯುರ್ವೇದ ವಿಜ್ಞಾನದ ಮೌಲ್ಯವನ್ನು ಉಳಿಸಿ, ಬೆಳೆಸಲು ಅವರಿಗಿರುವ ಬದ್ಧತೆ ನಿಜಕ್ಕೂ ಶ್ಲಾಘನೀಯ ಎಂಬುದು ಹಲವರ ಅನಿಸಿಕೆ.