ಪಾರ್ಟ್‌ಟೈಮ್ ಕೆಲಸದ ಆಮಿಷ: ಸಮುದಾಯ ಆರೋಗ್ಯಾಧಿಕಾರಿಗೆ ₹7.60 ಲಕ್ಷ ನಷ್ಟ

ತುಮಕೂರು: ಪಾರ್ಟ್ ಟೈಮ್ ಕೆಲಸದ ಆಮಿಷಕ್ಕೆ ಒಳಗಾಗಿ ಶಿರಾ ತಾಲ್ಲೂಕಿನ ಬೆಂಚಿ ಬಸವನಹಳ್ಳಿಯ ಸಮುದಾಯ ಆರೋಗ್ಯಾಧಿಕಾರಿ ಬಿ.ವಿ.ಮುರಳೀಧರ್ ₹7.60 ಲಕ್ಷ ಕಳೆದುಕೊಂಡಿದ್ದಾರೆ.
ಸೈಬರ್ ಆರೋಪಿಗಳು ವಾಟ್ಸ್ ಆಯಪ್ ಮುಖಾಂತರ ಪಾರ್ಟ್‌ಟೈಮ್ ಕೆಲಸ ಆಮಿಷ ಒಡ್ಡಿದ್ದಾರೆ.
ಅವರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದ ನಂತರ R-4212 WILLIAMS SONOMA ಎಂಬ ಟೆಲಿಗ್ರಾಂ ಗ್ರೂಪ್ ತೆರೆದುಕೊಂಡಿದೆ. ಸದರಿ ಗ್ರೂಪ್‌ನಲ್ಲಿ ಕಳುಹಿಸಿದ ವೆಬ್‌ಪೇಜ್ ಲಿಂಕ್‌ನಲ್ಲಿ ಮುರಳೀಧರ್ ಅಗತ್ಯ ಮಾಹಿತಿ ಸಲ್ಲಿಸಿದ್ದಾರೆ.
‘ವಿವಿಧ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚಿನ ಲಾಭ ನೀಡಲಾಗುವುದು’ ಎಂದು ತಿಳಿಸಿದ್ದಾರೆ. ಮೊದಲಿಗೆ ಬೋನಸ್ ₹11 ಸಾವಿರ, ಲಾಭಾಂಶ ಎಂದು ₹1,347ರಷ್ಟು ಹಣವನ್ನು ಮುರಳೀಧರ್ ಖಾತೆಗೆ ವರ್ಗಾಯಿಸಿದ್ದಾರೆ. ಹೆಚ್ಚಿನ ಹಣ ಹೂಡಿಕೆ ಮಾಡಿ, ಉತ್ಪನ್ನ ಖರೀದಿಸಿ ಮಾರಾಟ ಮಾಡುತ್ತಾ ಉತ್ತಮ ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ. ಮುರಳೀಧರ್ ಹಂತ ಹಂತವಾಗಿ ಒಟ್ಟು ₹7,79,246 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ₹18,741 ವಾಪಸ್ ಬಂದಿದೆ.
‘ಇನ್ನೂ ₹7 ಲಕ್ಷ ಕಟ್ಟಿದರೆ ಮಾತ್ರ ಹಣ ಮರಳಿಸುತ್ತೇವೆ ಎನ್ನುತ್ತಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಹಣ ವಾಪಸ್ ಕೊಡಿಸುವಂತೆ’ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.