ಭಾರತ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ಅಡ್ಡಗಾಲು: ಐಸಿಸಿ ಮುಂದಿಟ್ಟಿದೆ ಮೂರು ಪ್ರಮುಖ ಬೇಡಿಕೆಗಳು!

ದುಬೈ: ಭಾರತದ (India) ವಿರುದ್ಧ ಟಿ20 ವಿಶ್ವಕಪ್ (T20 World Cup) ಪಂದ್ಯವಾಡಲು ಭಾರೀ ಹೈಡ್ರಾಮಾ ನಡೆಸುತ್ತಿರುವ ಪಾಕಿಸ್ತಾನ (Pakistan) ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂದೆ ಮೂರು ಮಹತ್ವದ ಬೇಡಿಕೆ ಮುಂದಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಫೆ.15 ರಂದು ಶ್ರೀಲಂಕಾದ (Sri Lanka) ಕೊಲಂಬೋದಲ್ಲಿ ಭಾರತದ ವಿರುದ್ಧ ನಿಗದಿಯಾಗಿದ್ದ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ (PCB) ಐಸಿಸಿ ಸಂಭಾವ್ಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿತ್ತು. ಐಸಿಸಿ ಎಚ್ಚರಿಕೆಯ ಬೆನ್ನಲ್ಲೇ ಈಗ ಪಿಸಿಬಿ ಭಾರತದ ವಿರುದ್ಧ ಪಂದ್ಯವಾಡಲು ಒಪ್ಪಿಗೆ ನೀಡಲು ಮುಂದಾಗಿದ್ದರೂ ಮೂರು ಬೇಡಿಕೆಗಳನ್ನು ಮುಂದಿಟ್ಟಿದೆ.
ಭಾನುವಾರ ಐಸಿಸಿಯ ಉಪಾಧ್ಯಕ್ಷ ಇಮ್ರಾನ್ ಖವಜಾ ಲಾಹೋರ್ಗೆ ಭೇಟಿ ನೀಡಿದ್ದರು. ಇಮ್ರಾನ್ ಖವಜಾ ಬರುವ ವಿಚಾರ ತಿಳಿದು ಈ ಸಭೆಗೆ ಪಿಸಿಬಿ ಬಾಂಗ್ಲಾದೇಶ ಕ್ರಿಕೆಟ್ ಮುಖ್ಯಸ್ಥ (BCB) ಅಮಿನುಲ್ ಇಸ್ಲಾಂ ಅವರನ್ನು ಕರೆಸಿಕೊಂಡಿತ್ತು.

ಈ ಸಭೆಯಲ್ಲಿ ಬಾಂಗ್ಲಾದೇಶಕ್ಕೆ ಪರಿಹಾರವನ್ನು ಹೆಚ್ಚಿಸಬೇಕು, ಟಿ 20 ವಿಶ್ವಕಪ್ನಿಂದ ತಂಡವನ್ನು ಹೊರಗಿಟ್ಟಿದ್ದರೂ ಬಾಂಗ್ಲಾದೇಶಕ್ಕೆ ಭಾಗವಹಿಸುವಿಕೆಯ ಶುಲ್ಕ ನೀಡಬೇಕು, ಭವಿಷ್ಯದ ಐಸಿಸಿ ಟೂರ್ನಿಗಾಗಿ ಆತಿಥ್ಯ ವಹಿಸುವ ಹಕ್ಕು ನೀಡಬೇಕೆಂದು ಬೇಡಿಕೆ ಇರಿಸಿದೆ.
ಭಾರತದ ವಿರುದ್ಧದ ಪಂದ್ಯವನ್ನು ಆಡಲು ಕೆಲವು ಪಿಸಿಬಿ ಅಧಿಕಾರಿಗಳು ಒಮ್ಮತ ವ್ಯಕ್ತಪಡಿಸಿದ್ದರೂ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ವಿಷಯದಲ್ಲಿ ಅಸಹಕಾರ ತೋರುತ್ತಿದ್ದಾರೆ. ಅಧಿಕೃತವಾಗಿ ಪಿಸಿಬಿ ಇನ್ನೂ ಭಾರತದ ಜೊತೆ ಪಂದ್ಯವಾಡಲು ಒಪ್ಪಿಗೆ ನೀಡಿಲ್ಲ. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಮತ್ತೊಮ್ಮೆ ಸಮಾಲೋಚಿಸಲು ನಖ್ವಿ ಸೋಮವಾರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಲಿದ್ದಾರೆ.
ಈ ಮೊದಲು ಶೆಹಬಾಜ್ ಷರೀಫ್ ಅಧಿಕೃತವಾಗಿ ಭಾರತದ ವಿರುದ್ಧ ಪಾಕ್ ಪಂದ್ಯವಾಡಲ್ಲ ಎಂದು ತಿಳಿಸಿದ್ದರು. ಆದರೆ ಪಿಸಿಬಿಯಿಂದ ಐಸಿಸಿಗೆ ಪಂದ್ಯ ಬಹಿಷ್ಕಾರದ ಬಗ್ಗೆ ಯಾವುದೇ ಅಧಿಕೃತ ಪತ್ರ ಬಂದಿರಲಿಲ್ಲ.