ಪಾಕಿಸ್ತಾನದ ಶಾಹೀನ್ III ಕ್ಷಿಪಣಿ ಪರೀಕ್ಷೆ ವೇಳೆಯೇ ಪತನ

ಇಸ್ಲಾಮಾಬಾದ್:ಪಾಕಿಸ್ತಾನದ ಪರಮಾಣು ಸಾಮರ್ಥ್ಯದ ಶಾಹೀನ್ III (Shaeen-III) ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ವೇಳೆ ಮಂಗಳವಾರ (ಜು.22) ಪತನಗೊಂಡಿರುವುದಾಗಿ ವರದಿ ತಿಳಿಸಿದೆ.

ಶಾಹೀನ್ III (Shaeen-III) ಕ್ಷಿಪಣಿ ನಿಖರ ಗುರಿ ತಲುಪದೇ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ನಲ್ಲಿರುವ ಪರಮಾಣು ಕೇಂದ್ರದ ಬಳಿ ಪತನಗೊಂಡಿದ್ದು, ಸಂಭಾವ್ಯ ಅಪಾಯ ತಪ್ಪಿರುವುದಾಗಿ ವರದಿ ವಿವರಿಸಿದೆ.
ಬಲೂಚಿಸ್ತಾನದ ಡೇರಾ ಬುಗ್ಟಿ ಜಿಲ್ಲೆಯ ಜನವಸತಿ ಪ್ರದೇಶದ ಸಮೀಪ ಈ ದುರಂತ ನಡೆದಿರುವುದು ಪಾಕ್ ಸೇನೆಯ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಇದರಿಂದ ಸ್ಥಳೀಯರು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ನ್ಯೂಕ್ಲಿಯರ್ ಸಾಮರ್ಥ್ಯದ ಪರಮಾಣು ಪರೀಕ್ಷೆ ವಿಫಲಗೊಂಡ ಬೆನ್ನಲ್ಲೇ ಪಾಕಿಸ್ತಾನ ಸೇನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಅಷ್ಟೇ ಅಲ್ಲ ಜನರು ಮನೆಯಿಂದ ಹೊರಗೆ ಬಾರದಂತೆ ನಿರ್ಬಂಧ ವಿಧಿಸಿರುವುದಾಗಿ ವರದಿ ವಿವರಿಸಿದೆ.
ಶಾಹೀನ್ III ಕ್ಷಿಪಣಿ ಪತನಗೊಂಡ ಬಳಿಕ ಭಾರೀ ಸ್ಫೋಟ ಸಂಭವಿಸಿರುವುದಾಗಿ ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆ 20ರಿಂದ 50 ಕಿಲೋ ಮೀಟರ್ ದೂರದವರೆಗೆ ಕೇಳಿಸಿರುವುದಾಗಿ ವರದಿ ತಿಳಿಸಿದೆ.
ಶಾಹೀನ್ III ಕ್ಷಿಪಣಿ ಪತನಗೊಂಡ ನಂತರ ಜನರು ಭಯದಿಂದ ಓಡಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
