ಅತಿವೇಗದ ಕಾರು ಪಾದಚಾರಿಗೆ ಢಿಕ್ಕಿ – ಭೀಕರ ಅಪಘಾತದ ದೃಶ್ಯ ವೈರಲ್

ವಾಹನಗಳನ್ನು ನಿಧಾನವಾಗಿ ಓಡಿಸಿ, ನಿಧಾನವೇ ಪ್ರಧಾನ ಎಂದು ಜಾಗೃತಿ ಮೂಡಿಸಿದರೂ ಕೆಲವೊಬ್ಬರು ಇದನ್ನೆಲ್ಲಾ ಕ್ಯಾರೇ ಅನ್ನದೆ ರಸ್ತೆಯಲ್ಲಿ ವಾಹನ ಚಲಾಯಿಸುತ್ತಾರೆ. ಕೆಲವೊಮ್ಮೆ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಇದೀಗ ಅಂತಹದ್ದೇ ಭೀಕರ ಅಪಘಾತಕ್ಕೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್ ಆಗಿದೆ. ಯಮವೇಗದಲ್ಲಿ ಬಂದಂತಹ ಕಾರೊಂದು ರಸ್ತೆ ದಾಟುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಪಾದಚಾರಿ ಮೇಲಕ್ಕೆ ಹಾರಿಗೆ ರಸ್ತೆಗೆ ಎಸೆಲ್ಪಟ್ಟಿದ್ದಾರೆ. ಈ ಭೀಕರ ಅಪಘಾತದ ದೃಶ್ಯವು ಬೆಚ್ಚಿ ಬೀಳಿಸಿದ್ದು ನೆಟ್ಟಿಗರು ಚಾಲಕನ ವಿರುದ್ಧ ಗರಂ ಆಗಿದ್ದಾರೆ.ನಿಧಾನವೇ ಪ್ರಧಾನ, ಅತಿ ವೇಗದಲ್ಲಿ ವಾಹನ ಚಲಾಯಿಸಬೇಡಿ ಎಂದು ಹೇಳಿದರೂ ಕೂಡ ಅದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ವಿಡಿಯೋದಲ್ಲಿ ಪಾದಚಾರಿಯೊಬ್ಬರು ಸ್ಕೂಟರ್ ನಿಂದ ಇಳಿದು ರಸ್ತೆ ದಾಟಲು ಮುಂದಾಗಿದ್ದಾರೆ. ಇಲ್ಲಿ ಅಷ್ಟೇನು ವಾಹನ ದಟ್ಟನೆ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಇದೇ ವೇಳೆ ಯಮವೇಗದಲ್ಲಿ ಬಂದ ಕಾರು ಪಾದಚಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದು ಮುಂದಕ್ಕೆ ಎಳೆದುಕೊಂಡು ಹೋಗಿದ್ದು, ವ್ಯಕ್ತಿಯು ಕಾರಿನ ಮೇಲೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಈ ಅಪಘಾತ ಸಂಭವಿಸುತ್ತಿದ್ದಂತೆ ಅಲ್ಲೇ ಸ್ಥಳೀಯರು ಓಡೋಡಿ ಬಂದಿದ್ದಾರೆ. ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಅತಿವೇಗದ ಚಾಲನೆಗೆ ಪಾದಚಾರಿ ಜೀವದ ಜೊತೆ ಆಟವಾಡಬೇಡಿ’ ಎಂದಿದ್ದಾರೆ. ಮತ್ತೊಬ್ಬರು, ‘ಹಿರಿ ಜೀವಗಳು ರಸ್ತೆ ದಾಟುವಾಗ ವಾಹನ ಚಾಲಕರು ಈ ಬಗ್ಗೆ ಗಮನ ಕೊಡಿ’ ಎಂದಿದ್ದಾರೆ. ಇನ್ನೊಬ್ಬರು, ‘ ಈ ದೃಶ್ಯವು ನಿಜಕ್ಕೂ ಭಯಾನಕವಾಗಿದೆ. ವಾಹನ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
