ಉಳ್ಳಾಲದಲ್ಲಿ ಹೊರರಾಜ್ಯ ಯುವತಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ: ಸಾಮೂಹಿಕ ಅತ್ಯಾಚಾರದ ಶಂಕೆ

ಉಳ್ಳಾಲ : ಹೊರ ರಾಜ್ಯದ ಯುವತಿಯೊಬ್ಬಳು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ತಡರಾತ್ರಿ ನೀರು ಕೇಳಿಕೊಂಡು ಯುವತಿಯೊಬ್ಬಳು ಮನೆ ಬಾಗಿಲು ತಟ್ಟಿದ್ದಾಳೆ. ಈ ವೇಳೆ ಮನೆಯವರು ಬಾಗಿಲು ತೆಗೆದಾಗ ಯುವತಿಗೆ ಪ್ರಜ್ಞೆ ಇತ್ತು. ಆಕೆ ನಶೆಯಲ್ಲಿದ್ದಳು. ಕೆಲವೇ ಕ್ಷಣದಲ್ಲಿ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಮನೆಯವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆಕೆಗೆ ಪ್ರಜ್ಞೆ ಬಂದರೂ ನಶೆಯಲ್ಲಿದ್ದ ಕಾರಣ ಮಾತನಾಡಲಾಗದ ಸ್ಥಿತಿಯಲ್ಲಿದ್ದಳು.
ಈ ಪ್ರದೇಶದಲ್ಲಿ ನಿರ್ಜನ ಮನೆಯೊಂದಿದೆ. ಅಲ್ಲಿಗೆ ತಡರಾತ್ರಿ ಗಾಂಜಾ, ಅಮಲು ವ್ಯಸನಿಗಳು ನಿತ್ಯ ಬರುತ್ತಿರುತ್ತಾರೆ. ಅಲ್ಲೇ ನಿನ್ನೆ ತಡರಾತ್ರಿ ನಾಲ್ವರ ತಂಡವೂ ಇತ್ತು. ಯುವತಿ ಮನೆಯೊಂದರ ಬಾಗಿಲು ಬಡಿಯುತ್ತಿದ್ದಂತೆ ಆ ನಾಲ್ವರು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ನಶೆಯಲ್ಲಿರುವ ಯುವತಿ ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.