ಕಾರಿನಲ್ಲಿ ಲಾಕ್ ಮಾಡಿ ದಂಪತಿಯ ನಿರ್ಲಕ್ಷ್ಯಕ್ಕೆ ನಾಯಿ ಸಾವು

ನವದೆಹಲಿ: ವೃಂದಾವನದಲ್ಲಿ ನಡೆದ ದುರಂತ ಘಟನೆಯಲ್ಲಿ ಬಂಕೆ ಬಿಹಾರಿ ದೇವಾಲಯಕ್ಕೆ ಭೇಟಿ ನೀಡಿದ್ದ ದಂಪತಿ ತಮ್ಮ ಮುದ್ದಿನ ಲ್ಯಾಬ್ರಡಾರ್ ನಾಯಿಯನ್ನು ತಮ್ಮ ಕಾರಿನೊಳಗೆ ಬಿಟ್ಟು ಕಾರು ಲಾಕ್ ಮಾಡಿ ಹೋಗಿದ್ದರು. ಕಾರಿನೊಳಗೆ ಗಾಳಿಯಾಡದ ಹಿನ್ನೆಲೆಯಲ್ಲಿ ಬಿಸಿಲ ಶಾಖದಿಂದ ಕುಡಿಯಲು ನೀರು ಕೂಡ ಸಿಗದೆ ಸಾವನ್ನಪ್ಪಿದೆ. ವೃಂದಾವನದ ಶ್ರೀಯಾದ್ ಆಸ್ಪತ್ರೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕಾರಿನ ಒಳಗಿನಿಂದ ನಾಯಿಯ ಕಿರುಚಾಟ ಕೇಳಿ ಹತ್ತಿರದ ಜನರು ತಕ್ಷಣ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ ಅದು ಲಾಕ್ ಆಗಿತ್ತು. ಒದ್ದಾಡುತ್ತಿರುವ ನಾಯಿಯನ್ನು ರಕ್ಷಿಸಲು ಕೆಲವರು ಕಿಟಕಿ ಒಡೆಯಲು ಸೂಚಿಸಿದರು.

ಇನ್ನು ಕೆಲವರು ಮೆಕ್ಯಾನಿಕ್‌ಗೆ ಕರೆ ಮಾಡಿದರು. ಕೊನೆಗೆ ಕಾರಿನ ಬಾಗಿಲು ತೆರೆಯುವ ಹೊತ್ತಿಗೆ ನಾಯಿ ಅರ್ಧ ಸತ್ತಿತ್ತು. ಜನರು ತಕ್ಷಣ ನಾಯಿಯನ್ನು ಹೊರಗೆ ಎಳೆದು ಅದಕ್ಕೆ ನೀರು ಹಾಕಿ, ನೀರು ಕುಡಿಸಿದರೂ ನಾಯಿ ಬದುಕಲಿಲ್ಲ.
ಕಾರಿನ ಮಾಲೀಕರು ದೇವಸ್ಥಾನಕ್ಕೆ ಹೋಗುವಾಗ ಅಲ್ಲಿದ್ದ ಸ್ಥಳೀಯರು ಕಾರು ಮಾಲೀಕರಿಗೆ ಆ ನಾಯಿಯನ್ನು ಹೊರಗೆ ಕಟ್ಟುವಂತೆ ಸೂಚಿಸಿದ್ದರು. ಆದರೆ, ನಾಯಿ ಹೊರಗೆ ಸುರಕ್ಷಿತವಾಗಿರುವುದಿಲ್ಲ ಎಂದು ಅವರು ಕಾರಿನೊಳಗೆ ಬಿಟ್ಟು ಹೋಗಿದ್ದರು. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉಸಿರುಗಟ್ಟಿದ ಕಾರಿನೊಳಗೆ ಹೋರಾಡುತ್ತಿರುವ ನಾಯಿಯ ವಿಡಿಯೋ ನೋಡುಗರನ್ನು ಕಣ್ಣೀರು ಸುರಿಸುವಂತೆ ಮಾಡಿತು.

ವೈದ್ಯರ ವರದಿಗಳ ಪ್ರಕಾರ, ಆ ನಾಯಿಯ ಸಾವಿಗೆ ಕಾರಣ ಉಸಿರುಗಟ್ಟುವಿಕೆ. ಈ ಘಟನೆಯ ನಂತರ, ಸಾರ್ವಜನಿಕರು ಆ ನಾಯಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
