ಸ್ವಿಗ್ಗಿಯಲ್ಲಿ ಬೆಳ್ಳಿ ನಾಣ್ಯ ಆರ್ಡರ್ ಮಾಡಿದರೆ ಬಂದಿದ್ದು ಮ್ಯಾಗಿ: ನೆಟ್ಟಿಗರಿಂದ ತೀವ್ರ ಆಕ್ರೋಶ

ಇಂದು ನಾವು ಸಣ್ಣ ಸೂಜಿ ದಾರದಿಂದ ಹಿಡಿದು ಪ್ರಿಡ್ಜ್ ವಾಶಿಂಗ್ ಮೆಷಿನ್‌ವರೆಗೆ ಪ್ರತಿಯೊಂದನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುವುದು ಮೆಟ್ರೋ ನಗರಗಳಲ್ಲಿ ವಾಸಿಸುವ ಬಹುತೇಕರಿಗೆ ರೂಢಿಯಾಗಿದೆ. ಹೋಗಿ ಬರುವ ಸಮಯವೂ ಉಳಿಯುವುದರ ಜೊತೆಗೆ ಕುಳಿತಲ್ಲಿಂದಲೇ ಎಲ್ಲವನ್ನೂ ಈ ಮೂಲಕ ಪಡೆಯಬಹುದಾಗಿದೆ. ಆದರೆ ಇಲ್ಲೊಂದು ಕಡೆ ಹೀಗೆ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬ ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದ್ದು, ಆತನಿಗೆ ಬೆಳ್ಳಿ ನಾಣ್ಯಗಳ ಬದಲು ಮ್ಯಾಗಿ ಹಾಗೂ ಹಳದಿರಾಮ್ಸ್ ಬ್ರಾಂಡ್‌ನ ಕೆಲ ಮಿಕ್ಸ್ಚರ್ ಪ್ಯಾಕೇಟ್ ತಲುಪಿದ್ದು, ಇದನ್ನು ನೋಡಿ ಅವರು ಗಾಬರಿಯಾಗಿದ್ದಾರೆ. ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಇವರ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.

ಸ್ವಿಗ್ಗಿಲಿ ಬೆಳ್ಳಿ ನಾಣ್ಯ ಆರ್ಡರ್ ಮಾಡಿದ್ರೆ ಮ್ಯಾಗಿ ಬಂತು
ವಿನೀತ್ ಕೆ ಎಂಬುವವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಬೆಳ್ಳಿ ನಾಣ್ಯಗಳ ಆರ್ಡರ್ ಮಾಡಿದರು. ಆದರೆ ಅವರ ಮನೆ ಬಾಗಿಲಿಗೆ ಬಂದದ್ದು ಮ್ಯಾಗಿ ನೂಡಲ್ಸ್ ಮತ್ತು ಹಲ್ದಿರಾಮ್ ತಿಂಡಿಗಳಿಂದ ತುಂಬಿದ ಚೀಲ. ಈ ವಿಚಾರವನ್ನು ಎಕ್ಸ್‌ನಲ್ಲಿ ಬರೆದುಕೊಂಡ ಅವರು, ಇದು ಸ್ವಿಗ್ಗಿ ಹಾರರ್ ಸ್ಟೋರಿ ಎಂದು ಬಣ್ಣಿಸಿದ್ದಾರೆ. ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದೆ, ಆದರೆ ಮ್ಯಾಗಿ ಮತ್ತು ಹಲ್ದಿರಾಮ್ ಪ್ಯಾಕೆಟ್‌ಗಳು ಸಿಕ್ತು. ಇಡೀ ಆರ್ಡರ್‌ನಲ್ಲಿ ಒಂದು ಪೌಚ್ ಮಾತ್ರ ಬೆಳ್ಳಿ ಕಾಯಿನ್ ಇತ್ತು. ಅದನ್ನು ಸೀಲ್ ಮಾಡಲಾಗಿೆತ್ತು. ಡೆಲಿವರಿ ನೀಡಿದ ಯುವಕ ನಾವು ಅದನ್ನು ತೆರೆಯಲು ಸಾಧ್ಯವಿಲ್ಲ ನೀವು ಸಂಪೂರ್ಣ ಆರ್ಡರ್ ತೆಗೆದುಕೊಳ್ಳಿ ಅಥವಾ ಅದನ್ನು ರದ್ದುಗೊಳಿಸಿ ಎಂದು ಹೇಳಿದರು.
ಇದರಿಂದಾಗಿ ಸ್ವಿಗ್ಗಿ ಕಸ್ಟಮರ್ ಕೇರ್ ಜೊತೆಗೆ 40 ನಿಮಿಷವನ್ನು ಮಾತುಕತೆಯಲ್ಲಿ ಕಳೆಯಬೇಕಾಯ್ತು. ನಂತರ ಆ ಆರ್ಡರನ್ನು ಸ್ವೀಕರಿಸಿದೆ ಆದರೆ ಕೇವಲ ಬ್ಯಾಗಷ್ಟನ್ನೇ ನಾನು ತೆಗೆದುಕೊಂಡೆ ಉಳಿದಿದ್ದನ್ನು ಡೆಲಿವರಿ ಬಾಯ್‌ಗೆ ನೀಡಿದ್ದು, ಹಿಂದಿರುಗಿಸಲು ಸಾಧ್ಯವಾಗದಿದ್ದರೆ ನೀವೇ ಸೇವಿಸಿ ನಾನು ಅದನ್ನು ಅರ್ಡರ್ ಮಾಡಿಲ್ಲ, ನನಗೆ ಅದು ಬೇಡ ಎಂದು ಹೇಳಿದೆ. ನಂತರ ಸ್ವೀಕರಿಸಿದ ಬೆಳ್ಳಿ ನಾಣ್ಯವೂ ಸರಿಯಾಗಿರಲಿಲ್ಲ, 999 ಕ್ವಾಲಿಟಿಯ ಬೆಳ್ಳಿ ನಾಣ್ಯದ ಬದಲಿಗೆ 925 ಮೌಲ್ಯದ ಬೆಳ್ಳಿ ನಾಣ್ಯ ಸ್ವೀಕರಿಸಬೇಕಾಯ್ತು. ಕಡಿಮೆ ಶುದ್ಧತೆಯ ನಾಣ್ಯದ ಜೊತೆಗೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲು ಹೋಗಿ ಹಲವು ರೀತಿಯ ಸಂಕಷ್ಟ ಎದುರಿಸಬೇಕಾಯ್ತು ಎಂದು ಅವರು ಬರೆದುಕೊಂಡಿದ್ದಾರೆ.
ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದಕ್ಕೆ ನೆಟ್ಟಿಗರಿಂದ ಭಾರಿ ಆಕ್ರೋಶ:
ಅವರ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಕೆಲವೇ ನಿಮಿಷದಲ್ಲಿ ವೈರಲ್ ಆಯ್ತು. ನೀವು ಚಿನ್ನ ಬೆಳ್ಳಿಯನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ನಂತರ ಅಳುವುದಕ್ಕೆ ಹೋಗಬಾರದು ಎಂದು ಕಾಮೆಂಟ್ ಮಾಡಿದ್ದಾರೆ.
ಬಹುತೇಕರು ಚಿನ್ನ ಬೆಳ್ಳಿಯಂತಹ ಅಮೂಲ್ಯ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೊಂದು ದುಬಾರಿ ಮೌಲ್ಯದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವಷ್ಟು ಸೋಮಾರಿಗಳೇ ನೀವು? ಏಕೆ ದುಬಾರಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಿದ್ದೀರಿ ನೀವು ಸೋಮಾರಿಗಳೇ ಅಥವಾ ಮೂರ್ಖರೇ ಎಂದು ಕೆಲವರು ಅವರಿಗೆ ಕಾಮೆಂಟ್ ಮಾಡಿ ಪ್ರಶ್ನಿಸಿದ್ದಾರೆ. ಹಾಗೆಯೇ ಸ್ವಿಗ್ಗಿಯಲ್ಲಿ ಬೆಳ್ಳಿ ಆರ್ಡರ್ ಮಾಡಿದ್ದೇಕೆ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
ಇದಾದ ನಂತರ ಸ್ವಿಗ್ಗಿಯೂ ಇವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಇದಾದ ನಂತರ ಅವರು ಮತ್ತೊಂದು ಪೋಸ್ಟ್ ಮಾಡಿ ಸ್ವಿಗ್ಗಿ ಮತ್ತೊಂದು ಆರ್ಡರ್ ಮೂಲಕ ಸರಿಯಾದ ಆರ್ಡರ್ ನೀಡಿದೆ ಈ ಬಾರಿ ಬೆಳ್ಳಿ ನಾಣ್ಯಗಳು 999 ಪ್ಯೂರಿಟಿ ಹೊಂದಿದ್ದವು, ಆದರೆ ಅದರಲ್ಲೂ ಎರಡು ಮಾತ್ರ 925 ಶುದ್ಧತೆ ಹೊಂದಿದ್ದವು ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ವಿಗ್ಗಿ, ವಿನೀತ್, ನಾವು ನಿಮಗಾಗಿ ಬಯಸಿದ್ದು ಇದಲ್ಲ. ದಯವಿಟ್ಟು ಆರ್ಡರ್ ಐಡಿಯನ್ನು ಹಂಚಿಕೊಳ್ಳಿ ಇದರಿಂದ ನಾವು ಇದನ್ನು ಮತ್ತಷ್ಟು ಪರಿಹರಿಸಬಹುದು ಎಂದು ಸ್ವಿಗ್ಗಿ ಪ್ರತಿಕ್ರಿಯಿಸಿತು. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಮತ್ತು ವಿವರಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು, ನಾವು ತ್ವರಿತ ಪರಿಶೀಲನೆಯನ್ನು ನಡೆಸಲು ಬಯಸುತ್ತೇವೆ. ದಯವಿಟ್ಟು ನಮ್ಮನ್ನು ಸಹಿಸಿಕೊಳ್ಳಿ ಎಂದು ಸ್ವಿಗ್ಗಿ ಹೇಳಿದೆ.
