‘ಆಪರೇಷನ್ ಸಿಂಧೂರ’:ಭದ್ರತಾ ಕ್ರಮವಾಗಿ ವಿಮಾನ ನಿಲ್ದಾಣಗಳ ತಾತ್ಕಾಲಿಕ ಸ್ಥಗಿತ

ದೆಹಲಿ :ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಮಂಗಳವಾರ ಮಧ್ಯರಾತ್ರಿಯ ನಂತರ ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಮಿಂಚಿನ ದಾಳಿ ನಡೆಸಿದ್ದು, ಅಂತರರಾಷ್ಟ್ರೀಯ ಗಡಿ ಬಳಿಯ ಭಯೋತ್ಪಾದಕ ಶಿಬಿರಗಳನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು.
ಅಂತರರಾಷ್ಟ್ರೀಯ ಗಡಿಯಿಂದ 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯು, ಮುರಿಡ್ಕೆ ಮತ್ತು ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿರುವ ಲಷ್ಕರ್ ಶಿಬಿರದ ಮೇಲೆ ದಾಳಿ ಮಾಡಿತು. ಆದಾಗ್ಯೂ, ಆಪರೇಷನ್ ಸಿಂಧೂರ್‌ನಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆಯಾದರೂ ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತವು ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಕೇಂದ್ರ ಕಚೇರಿಯನ್ನು ಗುರಿಯಾಗಿಸಿಕೊಂಡಿತ್ತು. ಆಪರೇಷನ್ ಸಿಂಧೂರ್ ನಿಂದ ಎಚ್ಚರಗೊಂಡ ಪಾಕಿಸ್ತಾನ, ಗಡಿಗಳಲ್ಲಿ ಗುಂಡಿನ ದಾಳಿ ನಡೆಸಿತು. ಇದರಿಂದ ಎಚ್ಚೆತ್ತ ಭಾರತ ಸರ್ಕಾರ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಶ್ರೀನಗರ ಮಾತ್ರವಲ್ಲ, ಗಡಿಗಳಿಗೆ ಹತ್ತಿರದಲ್ಲಿರುವ ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾ ವಿಮಾನ ನಿಲ್ದಾಣಗಳನ್ನು ಸಹ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ವಿಮಾನ ನಿಲ್ದಾಣಗಳ ಮೂಲಕ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.
ಅದರಂತೆ, ಇಂದು ಮಧ್ಯಾಹ್ನ 12 ಗಂಟೆಯವರೆಗೆ ದೇಶಾದ್ಯಂತ ಏರ್ ಇಂಡಿಯಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಂಡಿಗೊ ಮತ್ತು ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗಳು ಸಹ ತಮ್ಮ ವಿಮಾನಗಳನ್ನು ರದ್ದುಗೊಳಿಸಿವೆ. ಮುಂದಿನ ಸೂಚನೆ ಬರುವವರೆಗೂ ಉತ್ತರ ಭಾರತದ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗುವುದು ಎಂದು ಘೋಷಿಸಲಾಗಿದೆ.
ಪಾಕಿಸ್ತಾನ-ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯ ನಂತರ, ಏರ್ ಇಂಡಿಯಾ, ಇಂಡಿಗೊ ಏರ್‌ಲೈನ್ಸ್ ಮತ್ತು ಸ್ಪೈಸ್‌ಜೆಟ್ ತಮ್ಮ ಪ್ರಯಾಣಿಕರಿಗೆ ಮಹತ್ವದ ಘೋಷಣೆಯನ್ನು ಹೊರಡಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರು ವಿಮಾನ ನಿಲ್ದಾಣವನ್ನು ತಲುಪುವ ಮೊದಲು ಈ ಪ್ರಕಟಣೆಯನ್ನು ಗಮನಿಸುವಂತೆ ವಿನಂತಿಸಿವೆ. ಈ ನಿಟ್ಟಿನಲ್ಲಿ, ಬಿಕನೇರ್, ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾ ಸೇರಿದಂತೆ ಹಲವು ನಗರಗಳಿಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಲಾಗಿದ್ದು, ಅಧಿಕೃತ ಘೊಷಣೆ ನೀಡಲಾಗಿದೆ.