ಆನ್ಲೈನ್ ಬೆಟ್ಟಿಂಗ್ ಚಟ: ಮುಖ್ಯ ಪೇದೆ ಆತ್ಮಹತ್ಯೆ, ಲಕ್ಷಾಂತರ ರೂಪಾಯಿ ನಷ್ಟ!

ಚಿಕ್ಕಬಳ್ಳಾಪುರ: ಕಾನೂನು ಬಾಹಿರ ಬೆಟ್ಟಿಂಗ್ ಚಟುವಟಿಕೆಗಳನ್ನು ಹತ್ತಿಕ್ಕಬೇಕಿದ್ದ ಪೊಲೀಸ್ ಮುಖ್ಯ ಪೇದೆಯೊಬ್ಬರು ತಾನೇ ಆನ್ಲೈನ್ ಗೇಮ್ ಬೆಟ್ಟಿಂಗ್ ದಂಧೆಯಲ್ಲಿ ಸಿಲುಕಿ ಲಕ್ಷಾಂತರ ರೂ. ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಚೇನಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಮುಖ್ಯ ಪೇದೆ ರಾಜಶೇಖರ್ (28) ಆತ್ಮಹತ್ಯೆ ಮಾಡಿಕೊಂಡವರು
ಬುಧವಾರ ಎಂದಿನಂತೆ ಕರ್ತವ್ಯಕ್ಕೆ ಬಂದಿದ್ದ ರಾಜಶೇಖರ್, ಕರ್ತವ್ಯ ಮುಗಿಸಿ ಮಧ್ಯಾಹ್ನ ವಿಶ್ರಾಂತಿ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ರಾಜಶೇಖರ್ಗೆ ಇಬ್ಬರು ಮಕ್ಕಳು ಇದ್ದಾರೆ. ಆನ್ಲೈನ್ ಗೇಮ್ನಿಂದಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ಎಸ್.ಶಿವಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಬುದ್ಧಿವಾದ ಹೇಳಿದ್ದ ಪತ್ನಿ
ಆನ್ಲೈನ್ ಗೇಮ್ ಚಟಕ್ಕೆ ಬಿದ್ದಿದ್ದ ರಾಜಶೇಖರ್ಗೆ ಹಲವು ಬಾರಿ ಪತ್ನಿಯೂ ಬುದ್ಧಿವಾದ ಹೇಳಿದ್ದರಂತೆ. ಆದರೆ ಯಾರ ಮಾತನ್ನೂ ಕೇಳದ ರಾಜಶೇಖರ್ಗೆ ಈಗ ಈ ಸ್ಥಿತಿ ಒದಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸ ತಿಳಿಸಿದರು
