ಒಲಾ ಎಐ ಇಂಜಿನಿಯರ್ ಆತ್ಮಹತ್ಯೆ: ಮ್ಯಾನೇಜರ್ ಕಿರುಕುಳ ಆರೋಪ

ಬೆಂಗಳೂರು: ಸಾಕಷ್ಟು ವಿವಾದಗಳಿಗೆ ಕಾರಣವಾಗುವ ಒಲಾ ಸಂಸ್ಥೆ ಈಗ ಮತ್ತೊಂದು ವಿವಾದಕ್ಕೆ ಸಿಲುಕುವಂತೆ ತೋರುತ್ತಿದೆ. ಒಲಾದ ಎಐ ಅಂಗವಾದ ಕೃತ್ರಿಮ್ನಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ವೊಬ್ಬರು ಮೇ 8ರಂದು ಅತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ರೆಡ್ಡಿಟ್ ಎನ್ನುವ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾದ ಒಂದು ಪೋಸ್ಟ್ನಿಂದ ಈ ಘಟನೆ ಬೆಳಕಿಗೆ ಬಂದಿದೆ. ನಿಖಿಲ್ ಸೋಮವಂಶಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ ಎನ್ನಲಾಗಿದೆ.

ನಿಖಿಲ್ ಸೋಮವಂಶಿ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಐಐಎಸ್ಸಿಯಿಂದ ಪದವಿ ಪಡೆದಿದ್ದರು. ಹತ್ತು ತಿಂಗಳ ಹಿಂದಷ್ಟೇ ಓಲಾ ಕೃತ್ತಿಮ್ ಎನ್ನುವ ಎಐ ಕಂಪನಿಗೆ ಸೇರಿದ್ದರು. ಈಗ ದಿಢೀರ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಂಪನಿಯೊಳಗಿದ್ದ ಕೆಟ್ಟ ಕೆಲಸದ ವಾತಾವರಣ ಹಾಗೂ ಕೆಲಸದ ಒತ್ತಡ ಎನ್ನುವ ಆರೋಪ ಕೇಳಿಬಂದಿದೆ.
ಫೈನಾನ್ಷಿಯಲ್ ಎಕ್ಸ್ಪ್ರೆಸ್ನಲ್ಲಿ ಈ ಬಗ್ಗೆ ವರದಿಯಾಗಿದ್ದು, ಒಲಾ ಕೃತ್ರಿಮ್ ಕಂಪನಿಯ ಮಾಜಿ ಉದ್ಯೋಗಿಯೊಬ್ಬರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ. ನಿಖಿಲ್ ಅವರು ಸಾಯುವ ಎರಡು ವಾರದ ಮುಂಚೆಯೇ ಆಫೀಸ್ಗೆ ಹೋಗುವುದನ್ನು ನಿಲ್ಲಿಸಿದ್ದರು. ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಆ ವ್ಯಕ್ತಿ ಹೇಳಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ.
ನಿಖಿಲ್ ಸೋಮವಂಶಿ ಅವರು ಸಾವನ್ನಪ್ಪಿರುವುದನ್ನು ಕಂಪನಿಯೂ ಖಚಿತಪಡಿಸಿದೆ. ಆದರೆ, ನಿಖಿಲ್ ಸಾವಿನಿಂದ ಬಹಳ ಬೇಸರವಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾಗಿ ವರದಿಯಲ್ಲಿ ಬರೆಯಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಾಗ ನಿಖಿಲ್ ರಜೆಯಲ್ಲಿದ್ದರು…
ನಿಖಿಲ್ ಸೋಮವಂಶಿ ಆತ್ಮಹತ್ಯೆ ಮಾಡಿಕೊಂಡ ವೇಳೆ ಅವರು ರಜೆಯಲ್ಲಿ ಇದ್ದರು. ಏಪ್ರಿಲ್ 17ರಂದು ಅವರು ಹೆಚ್ಚಿನ ವಿಶ್ರಾಂತಿ ಬಯಸಿ ರಜೆಯನ್ನು ವಿಸ್ತರಿಸಿಕೊಂಡಿದ್ದರು ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
ಅಸಂಬದ್ಧ ಮ್ಯಾನೇಜರ್ನಿಂದ ಉಪಟಳ: ರೆಡ್ಡಿಟ್ ಪೋಸ್ಟ್ನಲ್ಲಿ ಆಕ್ರೋಶ
ನಿಖಿಲ್ ಸೋಮವಂಶಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಬ್ರಿಲಿಯಂಟ್ ವಿದ್ಯಾರ್ಥಿಯಾಗಿದ್ದರು. ಬೆಂಗಳೂರಿನಲ್ಲಿ ಒಲಾ ಕೃತ್ರಿಮ್ನಲ್ಲಿ ಕೆಲಸಕ್ಕೆ ಸೇರಿದ ಬಳಿಕ ಒಂದು ಪ್ರಮುಖ ಪ್ರಾಜೆಕ್ಟ್ಗೆ ಅವರೇ ಲೀಡ್ ಆಗಿದ್ದರು. ಅಮೆರಿಕದಲ್ಲಿದ್ದ ರಾಜ್ಕಿರಣ್ ಎಂಬ ಹಿರಿಯ ಮ್ಯಾನೇಜರ್ ಅವರು ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತಿದ್ದರು ಎಂದು ರೆಡ್ಡಿಟ್ ಪೋಸ್ಟ್ನಲ್ಲಿ ಆರೋಪಿಸಲಾಗಿದೆ.
ರಾಜಕಿರಣ್ ಅವರಿಗೆ ಜನರನ್ನು ಸಂಭಾಳಿಸುವ ಕೌಶಲ್ಯ ಇಲ್ಲ. ಉದ್ಯೋಗಿಗಳನ್ನು ನಿಂದಿಸುತ್ತಾರೆ. ಟೀಮ್ ಮೀಟಿಂಗ್ನಲ್ಲಿ ಕಿರಿಚಾಡುತ್ತಾರೆ. ತಮ್ಮ ಮೇಲಿನ ಒತ್ತಡವನ್ನು ಅವರು ಕಿರಿಯ ಉದ್ಯೋಗಿಗಳ ಮೇಲೆ ತೋರಿಸುತ್ತಾರೆ ಎಂದು ಈ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಬರೆಯಲಾಗಿದೆ.
