ಜಾತಿ ಗಣತಿ ಮುಂದೂಡಲು ಒಕ್ಕಲಿಗರ ನಿಯೋಗದಿಂದ ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡುವಂತೆ ಒಕ್ಕಲಿಗ ಮುಖಂಡರ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿದೆ. ರಾಜ್ಯ ಒಕ್ಕಲಿಗ ಮೀಸಲಾತಿ ಸಮಿತಿಯ ಮುಖ್ಯ ಸಂಚಾಲಕ ನಾಗರಾಜ್ ಯಲಚವಾಡಿ ನೇತೃತ್ವದಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಕೆ ಮಾಡಿದೆ. ಈ ವಿಚಾರವಾಗಿ ನಂತರ ಪ್ರತಿಕ್ರಿಯೆ ನೀಡಿದ ನಿಯೋಗ, ‘ಸುಮಾರು 800 ಜಾತಿಗಳಿದ್ದವು. ಈಗ, ಹಿಂದುಳಿದ ವರ್ಗಗಳ ಆಯೋಗವು 1,561 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಯಾವುದೇ ವಿಚಾರಣೆ ಅಥವಾ ಮಾನವಶಾಸ್ತ್ರೀಯ ಅಧ್ಯಯನಗಳಿಲ್ಲದೆ ಜಾತಿಗಳನ್ನು ಸೇರಿಸಲಾಗಿದೆ. ಇದಲ್ಲದೆ, ಸರ್ಕಾರವು ಸಮೀಕ್ಷಾ ಅಪ್ಲಿಕೇಶನ್‌ನಲ್ಲಿ ಸರಿಯಾದ ತರಬೇತಿಯನ್ನು ನೀಡಿಲ್ಲ’ ಎಂದು ತಿಳಿಸಿದೆ.

ಈ ಎಲ್ಲ ಕಾರಣಗಳಿಂದಾಗಿ ನಾವು ಸಮೀಕ್ಷೆಯನ್ನು ಮುಂದೂಡಲು ಕೇಳಿದ್ದೇವೆ ಎಂದು ನಾಗರಾಜ್ ಯಲಚವಾಡಿ ಹೇಳಿದ್ದಾರೆ. ಈಗಾಗಲೇ ಸರ್ಕಾರ ಹೇಳಿರುವಂತೆ ಸಮೀಕ್ಷೆಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ಅರ್ಜಿಯನ್ನು ಪರಿಶೀಲಿಸುವುದಾಗಿ ಖರ್ಗೆ ಭರವಸೆ ನೀಡಿದ್ದಾರೆ ಎಂದು ಯಲಚವಾಡಿ ಹೇಳಿದ್ದಾರೆ.
ನವರಾತ್ರಿ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ಸಮೀಕ್ಷೆ ನಡೆಸಿದರೆ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗದು. ಆದ್ದರಿಂದ 45 ದಿನಗಳ ನಂತರ, 60 ದಿನಗಳ ಕಾಲ ಸಮೀಕ್ಷೆ ನಡೆಸಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ ಶನಿವಾರ ಆಗ್ರಹಿಸಿದ್ದರು. ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶನಿವಾರ ಒಕ್ಕಲಿಗ ಸಮುದಾಯದ ಬೃಹತ್ ಸಭೆ ನಡೆಸಲಾಗಿತ್ತು. ಅದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿ ಸಮುದಾಯದ ಅನೇಕ ಗಣ್ಯರು ಭಾಗವಹಿಸಿದ್ದರು.
ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಿಕೆ ಮಾಡಬೇಕು ಎಂಬ ಒತ್ತಾಯ ಕೂಡ ಸಭೆಯಲ್ಲಿ ಒಕ್ಕೊರಲಿನಿಂದ ಮೂಡಿಬಂದಿತ್ತು. ಸಭೆಯ ಬಳಿಕ ಮಾತನಾಡಿದ್ದ ವಿಪಕ್ಷ ನಾಯಕ ಆರ್.ಅಶೋಕ್, ಎಂಎಲ್ಸಿ ಸಿ.ಟಿ.ರವಿ, ಒಂದು ವೇಳೆ ಕ್ರಿಶ್ಚಿಯನ್ ಒಕ್ಕಲಿಗ ಎಂದು ಉಲ್ಲೇಖ ಮಾಡಿದರೆ, ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಇದೀಗ ಒಕ್ಕಲಿಗರ ನಿಯೋಗ ಎಐಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಕೆ ಮಾಡಿದೆ. ಮತ್ತೊಂದೆಡೆ, ಜಾತಿ ಗಣತಿ ಸೋಮವಾರದಿಂದ ಆರಂಭವಾಗಿದೆ. ಹಿಗಾಗಿ ಒಕ್ಕಲಿಗ ನಾಯಕರ ಮನವಿಗೆ ಖರ್ಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
