ಬೆಂಗಳೂರಿನಲ್ಲಿ ಎಣ್ಣೆ ಪಾರ್ಟಿ ಗಲಾಟೆ: ಯುವಕನ ಕಾಲು ತುಂಡು!

ಬೆಂಗಳೂರು: ಎಣ್ಣೆ ಪಾರ್ಟಿ ವೇಳೆ ನಡೆದ ಗಲಾಟೆಯಿಂದ ಯುವಕನೊಬ್ಬ ತನ್ನ ಕಾಲನ್ನೇ ಕಳೆದುಕೊಂಡ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಗಾಯಾಳು ಯುವಕನ ಹೆಸರು ತೇಜಸ್ (24) ಎಂದು ತಿಳಿದುಬಂದಿದೆ. ತೇಜಸ್ ಸ್ನೇಹಿತರಿಂದಲೇ ಈ ಕೃತ್ಯ ನಡೆದಿದೆ.
ಘಟನೆ ವಿವರ: ಆಟೋ ಚಾಲಕನಾಗಿರುವ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಸ್ನೇಹಿತ ಸಂತೋಷ್ ಜೊತೆ ಚಾಮರಾಜಪೇಟೆ ಠಾಣಾ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿರುವ ಮಂಜು ಬಾರ್‌ಗೆ ತೆರಳಿದ್ದ. ತೇಜಸ್ ಹಾಗೂ ಸಂತೋಷ್ ಪಾರ್ಟಿ ಮಾಡುತ್ತಿದ್ದಾಗ ಸಂತೋಷ್ ಸ್ನೇಹಿತರಾದ ರಾಹುಲ್, ಪ್ರಜ್ವಲ್ ಹಾಗೂ ಅಭಿಷೇಕ್ ಬಾರ್‌ಗೆ ಎಂಟ್ರಿ ಕೊಟ್ಟರು.
ಹೀಗೆ ಎಲ್ಲರೂ ಒಟ್ಟಿಗೆ ಕುಳಿತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಸಂತೋಷ್ ಹಾಗೂ ರಾಹುಲ್, ಪ್ರಜ್ವಲ್, ಅಭಿಷೇಕ್‌ನ ನಡುವೆ ಜಗಳ ಆರಂಭವಾಗಿತ್ತು. ಈ ವೇಳೆ ಸಂತೋಷ್‍ನ ಪರವಾಗಿ ತೇಜಸ್ ಮಾತನಾಡಿದ್ದ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಇಲ್ಲೇ ಇರು ಬರುತ್ತೇವೆ ಎಂದು ಆರೋಪಿಗಳು ಹೊರ ಹೋಗಿದ್ದರು.
ಇತ್ತ ಪಾರ್ಟಿ ಮುಗಿಸಿ ಸಂತೋಷ್ ಹಾಗೂ ತೇಜಸ್ ಇನ್ನೇನೋ ಹೊರಡಬೇಕೆನ್ನುವಷ್ಟರಲ್ಲಿ ಮಾರಕಾಸ್ತ್ರಗಳಿಂದ ಬಂದಿದ್ದ ಆರೋಪಿಗಳು ತೇಜಸ್‌ನನ್ನ ಅಟ್ಟಾಡಿಸಿ ಮಚ್ಚು ಬೀಸಿದ್ದಾರೆ. ಪರಿಣಾಮ ತೇಜಸ್‌ನ ಕಾಲು ಭಾಗಶಃ ತುಂಡಾಗಿದ್ದು, ಕುತ್ತಿಗೆ ಹಿಂಭಾಗಕ್ಕೂ ತೀವ್ರ ಗಾಯವಾಗಿದೆ. ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವನನ್ನ ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮತ್ತೊರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.