ಅಂಕಿಗಳು ಎಲ್ಲವಲ್ಲ: ಇಂದು ಉದ್ಯೋಗದಲ್ಲಿ ಕೌಶಲ್ಯಗಳ ಪ್ರಾಮುಖ್ಯತೆ

ದೆಹಲಿ :ಮಕ್ಕಳು ಓದುವಾಗ ಪಾಲಕರು, ಸಮಾಜದಲ್ಲಿರುವ ಕೆಲವರು ಚೆನ್ನಾಗಿ ಓದು, ಫಸ್ಟ್ ಬರಬೇಕು, ಮಾರ್ಕ್ಸ್ ಚೆನ್ನಾಗಿರಬೇಕು ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಮಾರ್ಕ್ಸ್ ಮಾತ್ರ ನಮ್ಮ ಜೀವನ ಕಟ್ಟಿಕೊಳ್ಳೋದಿಲ್ಲ ಎಂದು ಸಾಕಷ್ಟು ಬಾರಿ ಸಾಬೀತಾಗಿದೆ. ಮಾರ್ಕ್ಸ್ ಜೊತೆಯಲ್ಲಿ ಕೌಶಲ ತುಂಬ ಮುಖ್ಯ ಆಗುವುದು.
ದೆಹಲಿ ವಿಶ್ವವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿಯೊಬ್ಬಳು, ಕಾಲೇಜಿನಲ್ಲಿ ಟಾಪರ್ ಆಗಿದ್ದರೂ ಸೂಕ್ತವಾದ ಇಂಟರ್ನ್ಶಿಪ್ ಸಿಗಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಳು. ಬಿಸ್ಮಾ ಫರೀದ್ ಎಂಬ ವಿದ್ಯಾರ್ಥಿನಿ, 50ಕ್ಕೂ ಹೆಚ್ಚು ಸೆರ್ಟಿಫಿಕೇಟ್, 10ಕ್ಕೂ ಹೆಚ್ಚು ಪದಕಗಳು, 10ಕ್ಕೂ ಹೆಚ್ಚು ಟ್ರೋಫಿಗಳನ್ನು ಪಡೆದಿದ್ದೆ. ಆದರೆ ಇಂಟರ್ನ್ಶಿಪ್ ಮಾಡಲು ತುಂಬ ಕಷ್ಟಪಟ್ಟೆ” ಎಂದು ಹೇಳಿಕೊಂಡಿದ್ದಾರೆ. ಪ್ರಸ್ತುತ ದೆಹಲಿಯ ಹನ್ಸ್ರಾಜ್ ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸ್ನಲ್ಲಿ ಬಿಎ ಪದವಿ ಪಡೆಯುತ್ತಿರುವ ಅವರು, “ನಾನು ಟಾಪರ್ ಆಗಿದ್ದೇನೆ, ಆದರೂ ನನಗೆ ಇಂಟರ್ನ್ಶಿಪ್ ಸಿಗುತ್ತಿಲ್ಲ. ಕೌಶಲ್ಯಗಳು ಅಂಕಗಳಿಗಿಂತ ಮುಖ್ಯ ಎಂಬುದನ್ನು ಒಪ್ಪಿಕೊಳ್ಳಲು ತನಗೆ ಸ್ವಲ್ಪ ಸಮಯ ಬೇಕಾಯಿತು” ಎಂದು ಒಪ್ಪಿಕೊಂಡಿದ್ದಾಳೆ.
“ನನ್ನ ಎಲ್ಲ ಪ್ರೊಫೆಸರ್ಸ್, ಶಿಕ್ಷಕರು, ಸಂಬಂಧಿಕರು ನಿನ್ನ ಓದಿನ ಮೇಲೆ ಗಮನ ಕೊಡು ಎಂದು ಹೇಳಿದರು. ಓದು ನಿನಗೆ ಸಹಾಯ ಮಾಡುತ್ತದೆ, ಅದೇ ಎಲ್ಲ ಎಂದರು. ವಾಸ್ತವದಲ್ಲಿ, ಕಂಪನಿಗಳು ಉತ್ತರಗಳನ್ನು ಬಾಯಿಪಾಠ ಮಾಡುವ ವಿದ್ಯಾರ್ಥಿಗಳನ್ನು ಹುಡುಕುತ್ತಿಲ್ಲ, ಆದರೆ ಸಾಮಾನ್ಯ ಅಂಕಗಳೊಂದಿಗೆ ಒಂದು ಕೌಶಲ್ಯದಲ್ಲಿ ಪರಿಣತರಾದವರನ್ನು ಬಯಸುತ್ತವೆ” ಎಂದು ಅವಳು ಹೇಳಿದ್ದಾಳೆ.
“ನಾನು ನಿಮ್ಮ ಪುಸ್ತಕಗಳನ್ನು ಸುಡಬೇಕು ಅಥವಾ ನಿಮ್ಮ ಬ್ಯಾಗ್ಗಳನ್ನು ಎಸೆಯಬೇಕು ಎಂದು ಹೇಳುತ್ತಿಲ್ಲ, ಕೇವಲ ಒಂದು ಕೌಶಲ್ಯವನ್ನು ಆಯ್ಕೆ ಮಾಡಿ, ಅದನ್ನು ಅಭ್ಯಾಸ ಮಾಡಿ, ಅದರಲ್ಲಿ ಪರಿಣತರಾಗಿ, ಆಗ ತಕ್ಷಣವೇ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ” ಎಂದು ಹೇಳಿದ್ದಾರೆ. “ನಾನು ಇಷ್ಟುದಿನ ಪಡೆದ ಪ್ರಮಾಣ ಪತ್ರಗಳು, ಪದಕ ಎಲ್ಲವೂ ನನ್ನ ಇಂಟರ್ನ್ಶಿಪ್ ಸಂದರ್ಶನಗಳಲ್ಲಿ ಒಂದೇ ಒಂದು ಸಹಾಯ ಮಾಡಲಿಲ್ಲ” ಎಂದಿದ್ದಾಳೆ.
“ಶಾಲೆ ಅಥವಾ ಕಾಲೇಜಿನ ಟಾಪರ್ ಆಗಿರುವುದು ಕಾಗದದ ಮೇಲೆ ಚೆನ್ನಾಗಿ ಕಾಣಬಹುದು, ಆದರೆ ವಾಸ್ತವದಲ್ಲಿ, ಸಂಸ್ಥೆಗಳು ಶೈಕ್ಷಣಿಕ ಶ್ರೇಣಿಗಿಂತ ಪ್ರಾಯೋಗಿಕ ಅನುಭವ, ಕೌಶಲ್ಯಗಳಿಗೆ ಹೆಚ್ಚಿನ ಮೌಲ್ಯ ನೀಡುತ್ತವೆ” ಎಂದು ಓರ್ವ ಹೇಳಿಕೊಂಡಿದ್ದಾನೆ. “ಶಿಕ್ಷಣ ವ್ಯವಸ್ಥೆಯೇ ತನ್ನ ಮಕ್ಕಳನ್ನು ವೃತ್ತಿಪರ ಜಗತ್ತಿಗೆ ಸಿದ್ಧಪಡಿಸಲು ಸಾಕಷ್ಟು ತಯಾರಿಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ.
“ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಕಗಳು ಮುಖ್ಯ, ಉದ್ಯೋಗ ಪಡೆಯಲು ಸಹಾಯ ಮಾಡುತ್ತವೆ, ನಿಷ್ಠ ಉದ್ಯೋಗದ ಸಂದರ್ಶನಕ್ಕೆ ಆಯ್ಕೆಯಾಗಲು ಸಹಾಯ ಮಾಡುತ್ತವೆ. ಆದರೆ, ಸಂದರ್ಶನದ ನಂತರ ಅಥವಾ ಉದ್ಯೋಗ ಸಿಕ್ಕಿದ್ಮೇಲೆ, ನಿಮ್ಮ ವರ್ತನೆ, ಕೌಶಲ್ಯಗಳೇ ಮುಖ್ಯವಾಗುತ್ತವೆ. 12ನೇ ತರಗತಿಯವರೆಗಿನ ಅಂಕಗಳು IIM/MBB ಸಂದರ್ಶನಗಳಲ್ಲಿ ಸಹಾಯ ಮಾಡುತ್ತವೆ ಎಂದು ಇನ್ನೊಬ್ಬರು ಹೇಳಿದ್ದಾರೆ.
“ಸಂದರ್ಶನಗಳಿಗೆ ಪದವಿಗಳು, ಪ್ರಮಾಣಪತ್ರಗಳು ಮುಖ್ಯ, ಆದರೆ ಮುಂದೆ ನಿಮ್ಮ ಕೌಶಲ್ಯಗಳೇ ಹೆಚ್ಚು ಮುಖ್ಯವಾಗುತ್ತವೆ. ದುರದೃಷ್ಟವಶಾತ್, ಶಾಲೆಗಳು ಮತ್ತು ಕಾಲೇಜುಗಳು ಇನ್ನೂ ಇದರ ಮೇಲೆ ಹೆಚ್ಚು ಗಮನ ಕೊಡುತ್ತಿಲ್ಲ” ಎಂದು ಮತ್ತೋರ್ವರು ಬರೆದುಕೊಂಡಿದ್ದಾರೆ.