ರಸ್ತೆ ಇಲ್ಲದ ಪುಟ್ಟ ಗ್ರಾಮಕ್ಕೆ ಹೆಣ್ಣು ಕೊಡಲ್ಲ: ಉತ್ತರ ಕನ್ನಡದ ಮಚ್ಚಳ್ಳಿ ಗ್ರಾಮಸ್ಥರ ನರಕ ಯಾತನೆ!

ಉತ್ತರ ಕನ್ನಡ :ಅದು ಜಿಲ್ಲೆಯ ಪುಟ್ಟ ಗ್ರಾಮ (Village). ಆ ಗ್ರಾಮಕ್ಕೆ ಸರ್ಕಾರದ ಕನಿಷ್ಟ ಸೌಲಭ್ಯವೂ ಇಲ್ಲ. ಗ್ರಾಮದ ಬಹುತೇಕರು ಶಿಕ್ಷಣದಿಂದ ವಂಚಿತರಾಗಿದ್ದರೆ, ಅನಾರೋಗ್ಯ ಪಿಡಿತರು, ವಯೋ ವೃದ್ಧರ ನರಕ ಯಾತನೆ ನೊಡುವುದಕ್ಕೆ ಆಗಲ್ಲ. ಅಷ್ಟೇ ಅಲ್ಲದೆ ರಸ್ತೆ ಇಲ್ಲದಕ್ಕೆ ಯುವಕರಿಗೆ (boys) ಹೆಣ್ಣು ಕೊಡುತ್ತಿಲ್ಲ.

ಹೀಗಾಗಿ ಗ್ರಾಮದಲ್ಲಿ ಮಕ್ಕಳಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಚ್ಚಳ್ಳಿ ಗ್ರಾಮ, ಜಿಲ್ಲಾ ಕೇಂದ್ರ ಕಾರವಾರದಿಂದ 20ಕಿ.ಮೀ ಅಂತರದಲ್ಲಿದ್ದು, ದಟ್ಟ ಕಾಡಿನಿಂದ ಆವರಿಸಿರುವ ಗುಡ್ಡದ ಮೇಲಿದೆ. ಗ್ರಾಮಕ್ಕೆ ಹೊಗುವ ಸುಮಾರು 4 ಕಿ.ಮೀ ರಸ್ತೆ ಸಂಪೂರ್ಣವಾಗಿ ದಟ್ಟ ಕಾಡಿನ ಮೂಲಕ ಹಾದು ಹೋಗುತ್ತದೆ. ದಾರಿಯುದ್ದಕ್ಕೂ ದೊಡ್ಡ ದೊಡ್ಡ ಕಲ್ಲುಗಳು, ಮಣ್ಣಿನಿಂದ ಕೂಡಿದೆ. ರಸ್ತೆಯ ಪಕ್ಕದಲ್ಲೇ ಆಳವಾದ ಪ್ರಪಾತವಿದ್ದು, ಸ್ವಲ್ಪ ಯಾಮಾರಿದರೆ ಅನಾಹುತ ತಪ್ಪಿದ್ದಲ್ಲ.
ರಸ್ತೆ ಮಧ್ಯಯೇ ಹಳ್ಳ ಉಕ್ಕಿ ಹರಿಯುತ್ತಿದೆ. ಮಳೆಯ ನೀರಿನಿಂದ ರಸ್ತೆ ಪಾಚಿ ಕಟ್ಟಿದೆ. ಈ ರಸ್ತೆಯಲ್ಲಿ ಸಾಗಬೇಕು ಅಂದರೆ ಎಂತವರಿಗೂ ಜೀವ ಭಯ ಉಂಟಾಗುವುದು ಗ್ಯಾರಂಟಿ. ಸುಸಜ್ಜಿತ ರಸ್ತೆ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ಕೇಳುತ್ತಿದ್ದಾರೆ. ಆದರೆ ಇದುವರೆಗೂ ಕಚ್ಚಾ ರಸ್ತೆಯನ್ನು ಸಹಿತ ನಿರ್ಮಾಣ ಮಾಡಿಲ್ಲ.
ಇನ್ನೂ ಗ್ರಾಮದಲ್ಲಿ ಒಂದು ಆಸ್ಪತ್ರೆಯೂ ಇಲ್ಲದ ಹಿನ್ನೆಲೆ, ರೋಗಿಗಳು ಹಾಗೂ ವಯೋವೃದ್ಧರನ್ನ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕೆಂದರೆ ಉದ್ದಣೆಯ ಕಟ್ಟಿಗೆಗೆ ಕಂಬಳಿ ಕಟ್ಟಿ, ಜೋಳಿಗೆ ರೀತಿಯಲ್ಲಿ ಇಬ್ಬರು ಹೇಗಲ ಮೇಲೆ ಹೊತ್ತೊಯ್ಯಬೇಕು. ಇನ್ನೂ ಗರ್ಭಿಣಿ ಮಹಿಳೆಯರು ಹಾಗೂ ರೋಗಿಗಳ ವೇದನೆ ಹೇಳತೀರದಾಗಿದೆ.

12 ವರ್ಷಗಳಿಂದ ಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ
ಪ್ರತಿಯೊಂದು ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು, ಸರ್ಕಾರ ಕೊಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ ಈ ಗ್ರಾಮದಲ್ಲಿ ಮಾತ್ರ ಒಂದೇ ಒಂದು ಮೂಲಭೂತ ಸೌಕರ್ಯ ಇಲ್ಲ. ಕಳೆದ ಐದು ವರ್ಷಗಳ ಹಿಂದಷ್ಟೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಶಾಲೆ, ರಸ್ತೆ, ಬೀದಿ ದೀಪ, ಆಸ್ಪತ್ರೆ ಹೀಗೆ ಕನಿಷ್ಟ ಮೂಲಭೂತ ಸೌಕರ್ಯವೂ ಈ ಗ್ರಾಮದಲ್ಲಿ ಇಲ್ಲದ ಹಿನ್ನಲೆ ಕಳೆದ 12 ವರ್ಷಗಳಿಂದ ಈ ಗ್ರಾಮದ ಯುವಕರಿಗೆ ಯಾರೂ ಕೂಡ ಹೆಣ್ಣು ಕೊಡುತ್ತಿಲ್ಲ. ಇನ್ನೂ ಈ ಗ್ರಾಮ ಬಿಟ್ಟು ಬೇರೆ ಕಡೆ ಹೋಗಿ ನೆಲೆಸಬೇಕೆಂದರೆ ಇವರ ಬಳಿ ಹಣವಿಲ್ಲ.
ತಮ್ಮ ಬಳಿ ಇದ್ದ ಮನೆ- ಜಮೀನು ಮಾರಾಟ ಮಾಡಬೇಕೆಂದರೆ ರಸ್ತೆ ಸರಿ ಇಲ್ಲದ ಹಿನ್ನೆಲೆ ಗುಡ್ಡದ ಮೇಲಿನ ಜಮೀನು ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಗ್ರಾಮದಲ್ಲಿ ಶಾಲೆಯೂ ಇಲ್ಲದ ಹಿನ್ನೆಲೆ ಇಲ್ಲಿ ಅನಕ್ಷರಸ್ಥರು ಜಾಸ್ತಿ ಆಗಿದ್ದು, ಇಲ್ಲಿನ ಯುವಕರಿಗೆ ಚಿಕ್ಕ, ಪುಟ್ಟ ನೌಕರಿ ಮಾಡಿಕೊಂಡೆ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮದ ನಿವಾಸಿ ಅಪೂರ್ವಾ ಎಂಬುವವರು ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ, ಸಾರಿಗೆ ಸಂಪರ್ಕ ಹೀಗೆ ಎಲ್ಲ ಸೌಕರ್ಯಗಳಿಂದ ವಂಚಿರಾಗಿದ್ದು, ಈ ಗ್ರಾಮದ ಜನ ನಿತ್ಯವೂ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಆದಷ್ಟು ಬೇಗ ಮುಗ್ಧ ಜೀವಗಳ ನೆಮ್ಮದಿಯ ಬದುಕಿಗೆ ಸೂಸಜ್ಜಿತ ದಾರಿ ಮಾಡಿಕೊಡಬೇಕಿದೆ.
