ಪ್ರೇಮ ಮದುವೆಗೆ ರಕ್ಷಣೆ ಇಲ್ಲ: ಜೀವ ಬೆದರಿಕೆ ಇದ್ದಾಗ ಮಾತ್ರ ಪೊಲೀಸ್ ಭದ್ರತೆ – ಹೈಕೋರ್ಟ್

ಅಲಹಾಬಾದ್: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಪ್ರೇಮಿಗಳು ಪೊಲೀಸ್ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ತಮ್ಮ ತಂದೆ ತಾಯಿಯ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಪ್ರೇಮಿಗಳು ಅವರ ಜೀವ ಮತ್ತು ಸ್ವಾತಂತ್ರ್ಯಕ್ಕೆ ನಿಜವಾದ ಬೆದರಿಕೆ ಇಲ್ಲದಿದ್ದರೆ ಅಂತಹ ಜನರು ಪೊಲೀಸ್ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪ್ರೇಮ ದಂಪತಿಗಳಿಂದ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಈ ತೀರ್ಪು ನೀಡಿದ್ದಾರೆ. ಸ್ವಂತ ಇಚ್ಛೆಯಿಂದ ಮದುವೆಯಾಗುವವರಿಗೆ ಪೊಲೀಸ್ ರಕ್ಷಣೆಯ ಹಕ್ಕಿಲ್ಲ, ಅವರ ಜೀವ ಅಥವಾ ಸ್ವಾತಂತ್ರ್ಯಕ್ಕೆ ಏನಾದರೂ ಬೆದರಿಕೆ ಇದ್ದಾಗ ಮಾತ್ರ ಭದ್ರತೆ ಒದಗಿಸಬಹುದು ಎಂದು ಹೈಕೋರ್ಟ್ ಹೇಳಿದೆ. ಸೂಕ್ತ ಪ್ರಕರಣದಲ್ಲಿ ಯಾವುದೇ ದಂಪತಿಗಳಿಗೆ ನ್ಯಾಯಾಲಯ ಭದ್ರತೆ ಒದಗಿಸಬಹುದು, ಆದರೆ ಅವರಿಗೆ ಯಾವುದೇ ಬೆದರಿಕೆ ಇಲ್ಲದಿದ್ದರೆ ಅವರು ಪರಸ್ಪರ ಬೆಂಬಲಿಸಲು ಮತ್ತು ಸಮಾಜವನ್ನು ಎದುರಿಸಲು ಕಲಿಯಬೇಕು ಎಂದು ನ್ಯಾಯಾಲಯ ಹೇಳಿದ್ದು, ದಾಖಲೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ, ದಂಪತಿಗೆ ಯಾವುದೇ ಗಂಭೀರ ಬೆದರಿಕೆ ಇಲ್ಲ ಎಂದು ನ್ಯಾಯಾಲಯವು ಕಂಡುಕೊಂಡಿತು ಮತ್ತು ಅವರ ಅರ್ಜಿಯನ್ನು ವಿಲೇವಾರಿ ಮಾಡಿತು.

