ರಕ್ತ ಪರೀಕ್ಷೆಗೆ ಗಂಟೆಗಟ್ಟಲೆ ಕಾಯಬೇಕಿಲ್ಲ: ಕೆಲವೇ ನಿಮಿಷದಲ್ಲಿ ವರದಿ ನೀಡುವ ‘ಹೆಲ್ತ್ ಎಟಿಎಂ’ ಪರಿಚಯ

ಹೈದರಾಬಾದ್ : ಸಾಮಾನ್ಯವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋದರೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕು.. ಒಂದೇ ಪರೀಕ್ಷೆವಿದ್ದರೆ ಪರವಾಗಿಲ್ಲ.. ಅದೇ ಬೇರೆ ಬೇರೆ ರಕ್ತದ ಪರೀಕ್ಷೆಗಳಿದ್ದರೆ ಹಲವು ಬಾರಿ ರಕ್ತದ ಮಾದರಿ ತೆಗೆಯಬೇಕು..

ಇದರ ಜೊತೆ ಇಸಿಜಿ 2ಡಿ ಏಕೋಸ್ ಹಾಗೂ ಇತರ ಪರೀಕ್ಷೆಗಳಿಗಾಗಿ ಪ್ರತ್ಯೇಕ ಅಪಾಯಿಂಟ್ಮೆಂಟ್ಗಳನ್ನು ತೆಗೆದುಕೊಳ್ಳಬೇಕು. ಇಷ್ಟೆಲ್ಲಾ ಆದಮೇಲೆ ರಿಪೋರ್ಟ್ ಬರೋದಕ್ಕೆ ಮತ್ತೆ ಗಂಟೆಗಟ್ಟಲೇ ಕಾಯಬೇಕು.. ಆದರೆ ಇದೀಗ ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಲಾಗಿದ್ದು, ರಕ್ತ ಪರೀಕ್ಷೆಗೆ ದಿನಗಟ್ಟಲೇ ಕಾಯುವ ಅವಶ್ಯಕತೆ ಇರಲ್ಲ.
ಕೆಲವೇ ನಿಮಿಷಗಳಲ್ಲಿ ವರದಿ ಲಭ್ಯ: ದೆಹಲಿ ಮೂಲದ ಸ್ಟಾರ್ಟ್ಅಪ್ ಕ್ಲಿನಿಕ್ಸ್ ಆನ್ ಕ್ಲೌಡ್ ಹೆಲ್ತ್ ಎಟಿಎಂ (Health ATM) ಎಂಬ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು, ಒಂದೇ ಯಂತ್ರದಲ್ಲಿ ಸುಮಾರು 60 ವಿಧದ ವೈದ್ಯಕೀಯ ಪರೀಕ್ಷೆಗಳನ್ನು (Medical Report) ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವೆಂದರೆ, (Interesting Facts) ಕೆಲವೇ ನಿಮಿಷಗಳಲ್ಲಿ ಪರೀಕ್ಷೆಯ ವರದಿ ದೊರೆಯುತ್ತದೆ. ಈ ಮೂಲಕ ರೋಗಿಗಳಿಗೆ ರಕ್ತ ಪರೀಕ್ಷೆಯಾದ ಕೆಲವೇ ನಿಮಿಷದಲ್ಲಿ ವರದಿ ಸಿಗುತ್ತದೆ.
ಈಗಾಗಲೇ ಈ ತಂತ್ರಜ್ಞಾನವನ್ನು ತೆಲಂಗಾಣ (Telangana) ಸರ್ಕಾರವು ಕಿಂಗ್ ಕೋಟಿ ಹಾಗೂ ಮಲಕ್ಪೇಟ್ ಏರಿಯಾ ಆಸ್ಪತ್ರೆಯಲ್ಲಿ ಪ್ರಾಯೋಗಿಕ ಯೋಜನೆಯಾಗಿ ಈ ಆರೋಗ್ಯ ಎಟಿಎಂ ಅನ್ನು ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಅಲ್ಲದೇ ಬ್ಲಡ್ ರಿಪೋರ್ಟ್ ಕೂಡ ಜನರಿಗೆ ವೇಗವಾಗಿ ಸಿಗುತ್ತದೆ.
ನೋಡಲು ಬ್ಯಾಂಕ್ ATM ನಂತೆ ಕಾಣುವ ಯಂತ್ರ:
ಈ ಆರೋಗ್ಯ ಎ ಟಿ ಎಂ ನೋಡಲು ಬ್ಯಾಂಕ್ ATM ನಂತೆ ಕಾಣುತ್ತದೆ. ಈ ಯಂತ್ರವನ್ನು ರೋಗಿ ಇದರ ಮೇಲೆ ನಿಂತಿರುವಾಗಲೇ ಹಲವಾರು ರೋಗನಿರ್ಣಯ ಪರೀಕ್ಷೆಗಳನ್ನು ನಿರ್ವಹಿಸುವಂತೆ ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಇನ್ನು ಈ ಯಂತ್ರದ ಮೂಲಕ ಇಸಿಜಿ, ಹಿಮೋಗ್ಲೋಬಿನ್, ರಕ್ತದ ಸಕ್ಕರೆ, ರಕ್ತದೊತ್ತಡ, ಹೆಚ್ಬಿಎ1ಸಿ, ಶ್ವಾಸಕೋಶದ ಕಾರ್ಯ, ಹೃದಯರೋಗ ತಪಾಸಣೆ, ಲಿಪಿಡ್ ಪ್ರೊಫೈಲ್, ಡೆಂಗ್ಯೂ, ಮಲೇರಿಯಾ, ಹೃದಯ ರಕ್ತನಾಳದ ಮೌಲ್ಯಮಾಪನ ಸೇರಿದಂತೆ ಸುಮಾರು 60 ಪರೀಕ್ಷೆಗಳು ನಡೆಸಬಹುದಾಗಿದೆ.
ಕೆಲವು ರಕ್ತ ಪರೀಕ್ಷೆಗಳಿಗೆ ಈ ಯಂತ್ರಕ್ಕೆ ರಕ್ತದ ಮಾದರಿಯನ್ನು ನೀಡಬೇಕಾಗುತ್ತದೆ. ಹೆಚ್ಚುವರಿಯಾಗಿ, ಈ ಯಂತ್ರವು ಕಿವಿ, ಗಂಟಲು, ಮೂಗು ಮತ್ತು ಕಣ್ಣಿನ ಸ್ಥಿತಿಗಳ ಮೂಲಭೂತ ತಪಾಸಣೆಗಳನ್ನು ನಡೆಸುತ್ತದೆ. ವಿಶೇಷ ಎಂದರೆ ಇದೊಂದು ಸಮಗ್ರ ರೋಗನಿರ್ಣಯ ಸಾಧನವಾಗಿದೆ.
ಈ ಬಗ್ಗೆ ವೈದ್ಯಕೀಯ ಮಂಡಳಿಯ ಆಯುಕ್ತ ಡಾ. ಅಜಯ್ ಕುಮಾರ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಆರೋಗ್ಯ ಎ ಟಿ ಎಂ ನ ಪ್ರಾಯೋಗಿಕ ಹಂತದಲ್ಲಿ ಫಲಿತಾಂಶಗಳನ್ನು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ಯಶಸ್ವಿಯಾದರೆ ರಾಜ್ಯದ ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಎಟಿಎಂ ಅಳವಡಿಸಲಾಗುವುದು ಎಂದರು.
ಹೆಲ್ತ್ ಎಟಿಎಂ ಗುರಿ:
ಈ ಯಂತ್ರದ ಮುಖ್ಯ ಉದ್ದೇಶ ರೋಗನಿರ್ಣಯವನ್ನು ಸುಲಭಗೊಳಿಸುವುದು.
ಪರೀಕ್ಷೆಗಾಗಿ ಹಲವು ಆಸ್ಪತ್ರೆಗಳಿಗೆ ಹೋಗುವ ತೊಂದರೆಯನ್ನು ಕಡಿಮೆ ಮಾಡುವುದು.
ನಿರ್ದಿಷ್ಟ ಸಮಯದಲ್ಲಿ ರೋಗಿಗಳಿಗೆ ಪರೀಕ್ಷೆ ಲಭ್ಯವಾಗುವಂತೆ ಮಾಡುವುದು.
ಕೆಲವೇ ನಿಮಿಷಗಳಲ್ಲಿ ವರದಿಗಳನ್ನು ನೀಡುತ್ತದೆ, ಇದರಿಂದ ವೈದ್ಯರು ತ್ವರಿತವಾಗಿ ಚಿಕಿತ್ಸೆ ಆರಂಭಿಸಬಹುದು.
ಇದರ ಪರಿಣಾಮವಾಗಿ ರೋಗಿಗಳ ಆರೈಕೆಯ ಗುಣಮಟ್ಟವೂ ಉತ್ತಮವಾಗುತ್ತದೆ.
ಈ ತಂತ್ರಜ್ಞಾನವು ಪ್ರತಿದಿನದ ಹಾಗೂ ತುರ್ತು ಆರೋಗ್ಯ ತಪಾಸಣೆಗಳಲ್ಲಿ, ವಿಶೇಷವಾಗಿ ಹೆಚ್ಚಿನ ರೋಗಿಗಳಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಾಯಕವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಈ ಆರೋಗ್ಯ ಎ ಟಿ ಎಂ ಅಭಿವೃದ್ದಿಯಾದರೆ ಹೆಚ್ಚು ಪರಿಣಾಮಕತ್ವವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ರಕ್ತ ಪರೀಕ್ಷೆಗಾಗಿ ಉಂಟಾಗುವ ಜನದಟ್ಟಣೆ ಕಡಿಮೆಯಾಗುತ್ತದೆ ಮತ್ತು ತ್ವರಿತ, ನಿಖರ ರೋಗನಿರ್ಣಯ ಸಾಧ್ಯವಾಗುತ್ತದೆ.
ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ತೆಲಂಗಾಣ ಸರ್ಕಾರ ಆರೋಗ್ಯ ಎಟಿಎಂ ಜಾಲವನ್ನು ಇನ್ನಷ್ಟು ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಇದರಿಂದ ಜನರು ವೇಗವಾಗಿ, ಸುಲಭವಾಗಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ.