ಪೇಟಿಎಂ ಯುಪಿಐ ಸ್ಥಗಿತದ ಆತಂಕ ಬೇಡ: ಯಾರಿಗೆ ಅನ್ವಯ? ಇಲ್ಲಿದೆ ಸಂಪೂರ್ಣ ವಿವರ

ನೀವು ಪೇಟಿಎಂ ಯುಪಿಐ (Paytm UPI ) ಬಳಸುತ್ತಿದ್ದರೆ ಆಗಸ್ಟ್ 31 ರ ನಂತರ ಅದು ಸ್ಥಗಿತಗೊಳ್ಳುತ್ತಿದೆ ಎನ್ನುವ ಮೆಸೇಜ್ ಬಂದಿರಬೇಕು ಅಲ್ಲವೆ? ಗೂಗಲ್ಪ್ಲೇಸ್ಟೋರ್ನಲ್ಲಿಯೂ ಈ ಮೆಸೇಜ್ ನೋಡಿರಲಿಕ್ಕೆ ಸಾಕು. ಇದರಿಂದ ನೀವು ಶಾಕ್ಗೆ ಒಳಗಾಗಿರಬಹುದು. ಶುಕ್ರವಾರ ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂನ ಲಕ್ಷಾಂತರ ಬಳಕೆದಾರರಲ್ಲಿ ಹಠಾತ್ ಗೊಂದಲ ಉಂಟು ಮಾಡಿದೆ. ಗೂಗಲ್ ಪ್ಲೇನಿಂದ ಬಂದ ಅಧಿಸೂಚನೆ ತುಂಬಾ ಗೊಂದಲವನ್ನು ಉಂಟು ಮಾಡುತ್ತಿದೆ. ಆಗಸ್ಟ್ 31 ರ ನಂತರ ಪೇಟಿಎಂ ಯುಪಿಐ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎನ್ನುವ ಅರ್ಥ ಬರುವ ಹಿನ್ನೆಲೆಯಲ್ಲಿ, ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿಯೂ ಈ ಸಂದೇಶ ಹಾಕಿ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ. ಪೇಟಿಎಂನಿಂದ ಹಣ ಕಳುಹಿಸುವುದು ಅಥವಾ ಸ್ವೀಕರಿಸುವುದು ನಿಲ್ಲುತ್ತದೆಯೇ ಎಂಬ ಪ್ರಶ್ನೆಗಳು ನಿಮ್ಮನ್ನೂ ಕಾಡುತ್ತಿರಬಹುದು.

ಆದರೆ ಇದು ಕೆಲವರಿಗೆ ಮಾತ್ರ ಅನ್ವಯ ಆಗುತ್ತದೆ. ಅಷ್ಟಕ್ಕೂ ಪೇಟಿಎಂ ಯುಪಿಐ ಬಳಸುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಇದೀಗ ಡಿಜಿಟಲ್ ಯುಗ. ಯುಪಿಐ ಎನ್ನುವುದು ಮಾಮೂಲು ಆಗಿಬಿಟ್ಟಿದೆ. ಕ್ಯಾಷ್ ತೆಗೆದುಕೊಂಡು ಹೋಗುವುದೇ ಅಪರೂಪ ಎನ್ನುವಷ್ಟರ ಮಟ್ಟಿಗೆ ಇದರ ಉಪಯೋಗ ಆಗುತ್ತಿದೆ. ಭಾರತ ಮಾತ್ರವಲ್ಲದೇ ಕೆಲವು ವಿದೇಶಗಳಲ್ಲಿಯೂ ಭಾರತದ ಯುಪಿಐ ಇದೀಗ ಚಾಲ್ತಿಯಲ್ಲಿದೆ. ಹಾಗಿದ್ದರೆ ಪೇಟಿಎಂ ಯುಪಿಐ ಸ್ಥಗಿತದ ಬಗ್ಗೆ ಬಂದಿರುವ ಮಾಹಿತಿ ಏನು? ಯಾರಿಗೆಲ್ಲಾ ಅನ್ವಯ ಎನ್ನುವ ಡಿಟೇಲ್ಸ್ ಇಲ್ಲಿದೆ…
ನಿಜವಾದ ವಿಷಯವೇನು?
ಬಳಕೆದಾರರು ಈ ಸಂದೇಶ ನೋಡಿ ಭಯಪಡುವ ಅಗತ್ಯವಿಲ್ಲ. ನಿಮ್ಮ ಯುಪಿಐ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ಪೇಟಿಎಂ ಸ್ಪಷ್ಟಪಡಿಸಿದೆ. ಏಕೆಂದರೆ ವಾಸ್ತವವಾಗಿ, ಆಗಸ್ಟ್ 31, 2025 ರ ನಂತರ @Paytm UPI ಹ್ಯಾಂಡಲ್‌ಗಳನ್ನು ಸ್ವೀಕರಿಸಲಾಗುವುದಿಲ್ಲ ಎನ್ನುವುದು ಇದರ ಅರ್ಥ. ಈ ಹಿನ್ನೆಲೆಯಲ್ಲಿ Google Play ತನ್ನ ಬಳಕೆದಾರರಿಗೆ ಅಧಿಸೂಚನೆಯನ್ನು ಕಳುಹಿಸಿದೆ. ಸುಲಭವಾಗಿ ಹೇಳಬೇಕು ಎಂದರೆ, @paytm ನಿಂದ ಪ್ರಾರಂಭವಾಗುವ UPI ಐಡಿಗಳನ್ನು Google Play ನಲ್ಲಿ ಪಾವತಿಗಾಗಿ ಬಳಸಲಾಗುವುದಿಲ್ಲ. ಆದ್ದರಿಂದ ಸಾಮಾನ್ಯ ಬಳಕೆದಾರರು ಹೆದರುವ ಅಗತ್ಯವಿಲ್ಲ.
ಪೇಟಿಎಂ ಹೇಳಿದ್ದೇನು?
ಈ ಬಗ್ಗೆ ಇದಾಗಲೇ ಪೇಟಿಎಂ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ಅಧಿಸೂಚನೆ ಕೊಟ್ಟಿರುವುದು ನಿಜ. ಆದರೆ ಈ ಬದಲಾವಣೆಯು ಪುನರಾವರ್ತಿತ ಪಾವತಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕಂಪನಿ ಹೇಳಿದೆ. ಇದರ ಅರ್ಥ YouTube ಪ್ರೀಮಿಯಂ, Google One ಅಥವಾ ಯಾವುದೇ ಇತರ ಚಂದಾದಾರಿಕೆ ಸೇವೆಯಂತಹ ಪ್ರತಿ ತಿಂಗಳು ಸ್ವಯಂಚಾಲಿತ ಪಾವತಿಗಳು… ಇವುಗಳಿಗೆ ಮಾತ್ರ ಅನ್ವಯ ಆಗಲಿದೆ.
ಬಳಕೆದಾರರು ಮತ್ತು ವ್ಯಾಪಾರಿಗಳಿಗೆ ಸಾಮಾನ್ಯ UPI ಪಾವತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪೇಟಿಎಂ ಹೇಳಿದೆ. ಸುಲಭದಲ್ಲಿ ಹೇಳಬೇಕು ಎಂದರೆ, ನೀವು YouTube ಪ್ರೀಮಿಯಂ, ಗೂಗಲ್ ಒನ್ ಸಂಗ್ರಹಣೆ ಅಥವಾ ಪೇಟಿಎಂ ಯುಪಿಐನೊಂದಿಗೆ ಯಾವುದೇ ಸೇವೆಗೆ ಸ್ವಯಂಚಾಲಿತ ಪಾವತಿಗಳನ್ನು ಮಾಡಿದರೆ, ನಿಮ್ಮ ಹಳೆಯ @paytm ಯುಪಿಐ ಹ್ಯಾಂಡಲ್ ಅನ್ನು ನೀವು ಬದಲಾಯಿಸಬೇಕಾಗುತ್ತದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪೇಟಿಎಂ ಅನ್ನು ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪೂರೈಕೆದಾರ (TPAP) ಆಗಿ ಅನುಮೋದಿಸಿದ ನಂತರ ಈ ಬದಲಾವಣೆಯನ್ನು ಮಾಡಲಾಗುತ್ತಿದೆ. ಈ ಪ್ರಕ್ರಿಯೆಯ ಅಡಿಯಲ್ಲಿ, ಬಳಕೆದಾರರನ್ನು ಹೊಸ ಬ್ಯಾಂಕ್-ಪಾಲುದಾರ ಹ್ಯಾಂಡಲ್‌ಗಳಿಗೆ ವರ್ಗಾಯಿಸಲಾಗುತ್ತಿದೆ. ಆಗಸ್ಟ್ 31 ರ ಕೊನೆಯ ದಿನಾಂಕವನ್ನು ಚಂದಾದಾರಿಕೆ ಪಾವತಿಗಳಿಗೆ ಮಾತ್ರ ನೀಡಲಾಗಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.
ಹಾಗಿದ್ದರೆ ಹೊಸ ಯುಪಿಐ ಐಡಿ ಹೀಗಿರುತ್ತದೆ:
ಈ ಬಗ್ಗೆ ಪೇಟಿಎಂ ಸ್ಪಷ್ಟಪಡಿಸಿದೆ. ಅದೇನೆಂದರೆ, ಉದಾಹರಣೆಗೆ: ಯಾರೊಬ್ಬರ UPI ಐಡಿ ಮೊದಲು rajesh@paytm ಆಗಿದ್ದರೆ , ಈಗ ಅದನ್ನು rajesh@pthdfc , rajesh@ptsbi , rajesh@ptaxis ಅಥವಾ rajesh@ptyes ಎಂದು ಬದಲಾಯಿಸಬಹುದು . ಅಂದರೆ, ಬಳಕೆದಾರರು ತಮ್ಮ ಬ್ಯಾಂಕ್‌ಗೆ ಲಿಂಕ್ ಮಾಡಲಾದ ಹೊಸ ಹ್ಯಾಂಡಲ್ ಅನ್ನು ಆರಿಸಬೇಕಾಗುತ್ತದೆ. ಪೇಟಿಎಂನ ಹೊಸ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪೂರೈಕೆದಾರ (TPAP) ಆಗಿ NPCI (ಭಾರತೀಯ ರಾಷ್ಟ್ರೀಯ ಪಾವತಿ ನಿಗಮ) ದಿಂದ ಅನುಮೋದನೆ ಪಡೆದ ನಂತರ ಈ ಬದಲಾವಣೆಯನ್ನು ಮಾಡಲಾಗುತ್ತಿದೆ.
ಪೇಟಿಎಂ ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ತೆರೆಯಲು ಮತ್ತು ಅವರ UPI ಐಡಿಯನ್ನು ಹೊಸ ಹ್ಯಾಂಡಲ್‌ಗೆ ನವೀಕರಿಸಲು ಸೂಚಿಸಲಾಗಿದೆ. ನೀವು ಬಯಸಿದರೆ, ನೀವು ನಿಮ್ಮ ಪುನರಾವರ್ತಿತ ಪಾವತಿಗಳನ್ನು PhonePe ಅಥವಾ Google Pay ನಂತಹ ಮತ್ತೊಂದು UPI ಅಪ್ಲಿಕೇಶನ್‌ಗೆ ಲಿಂಕ್ ಮಾಡಬಹುದು. ಇದರ ಹೊರತಾಗಿ, ಈ ಪಾವತಿಗಳಿಗಾಗಿ ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಸಹ ಆಯ್ಕೆ ಮಾಡಬಹುದು.
