ಸಣ್ಣ ಅಪಘಾತಗಳಿಗೆ ಪೊಲೀಸ್ ಠಾಣೆಗೆ ಹೋಗುವ ಗೋಳು ತಪ್ಪಿತು; ‘BTP ASTraM’ ಆ್ಯಪ್‌ನಲ್ಲಿ ‘ಇ-ಆ್ಯಕ್ಸಿಡೆಂಟ್ ರಿಪೋರ್ಟ್’ ಸೌಲಭ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆಯೂ ಡಬಲ್ ಆಗಿದ್ದು, ಸಣ್ಣಪುಟ್ಟ ಅಪಘಾತಗಳು ದಿನನಿತ್ಯ ಮಾಮೂಲು ಎಂಬಂತಾಗಿವೆ. ಈ ಹಿನ್ನಲೆ ಸೇವೆಯನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಮಹತ್ವದ ಬದಲಾವಣೆ ತಂದಿದ್ದು, ಇ-ಆ್ಯಕ್ಸಿಡೆಂಟ್ ರಿಪೋರ್ಟ್ ದಾಖಲಿಸಲು ಸಾರ್ವಜನಿಕರಿಗೆ ಅವಕಾಶ ಒದಗಿಸಿದೆ.

ಸಣ್ಣಪುಟ್ಟ ಅಪಘಾತಗಳು ನಡೆದಾಗಲೂ ಪೊಲೀಸ್ ಠಾಣೆಗೆ ತೆರಳಿ ಆ ಬಗ್ಗೆ ದೂರು ನೀಡುವುದು ಬಹಳ ತ್ರಾಸದಾಯಕ ಮತ್ತು ಸಮಯ ವ್ಯರ್ಥಕ್ಕೆ ಕಾರಣವಾಗಲಿದೆ. ಹೀಗಾಗಿ BTP ASTraM ಆ್ಯಪ್‌ನಲ್ಲಿ ಇ-ಆ್ಯಕ್ಸಿಡೆಂಟ್ ರಿಪೋರ್ಟ್ ಎಂಬ ಆಯ್ಕೆಯನ್ನು ಪೊಲೀಸ್ ಇಲಾಖೆ ಹೊಸದಾಗಿ ಪರಿಚಯಿಸಿದೆ. ಈ ಮೂಲಕ ಅಪಘಾತ ನಡೆದ ಜಾಗದಿಂದಲೇ ನೀವು ಆ ಬಗ್ಗೆ ದೂರು ದಾಖಲಿಸಬಹುದಾಗಿದ್ದು, ನಿಮ್ಮ ಕಂಪ್ಲೇಂಟ್ ಸ್ವೀಕರಿಸಿದ ಬಗ್ಗೆ ದಾಖಲೆಯೂ ಕೂಡಲೇ ಸಿಗಲಿದೆ.ಇ-ಆ್ಯಕ್ಸಿಡೆಂಟ್ ರಿಪೋರ್ಟ್ ದಾಖಲಿಸೋದು ಹೇಗೆ?
- ಮೊದಲು BTP ASTraM ಆ್ಯಪನ್ನು ನಿಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ
- ಆ್ಯಪ್‌ನಲ್ಲಿ ನೀಡಲಾಗಿರುವ ಇ-ಆ್ಯಕ್ಸಿಡೆಂಟ್ ರಿಪೋರ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಅಪಘಾತದ ಫೋಟೋ ಜೊತೆಗೆ ಅಗತ್ಯ ಮಾಹಿತಿಯನ್ನು ದಾಖಲಿಸಿ
- ನಿಮ್ಮ ದೂರು ಸ್ವೀಕೃತವಾದ ಬಗ್ಗೆ ದಾಖಲೆಯನ್ನು ಕೂಡಲೇ ಪಡೆಯಿರಿ
ಕೇವಲ ನಮ್ಮ ವಾಹನಗಳು ಅಪಘಾತವಾದಾಗ ಮಾತ್ರವಲ್ಲದೆ ಇತರ ಅಪಘಾತಗಳಿಗೆ ನಾವು ಸಾಕ್ಷಿಯಾದಾಗಲೂ ಆ ಬಗ್ಗೆ ದೂರು ದಾಖಲಿಸಬಹುದಾಗಿದೆ. Report My Accident ಮತ್ತು Report Accident I Witnesses ಎಂಬ ಎರಡು ಆಯ್ಕೆಯನ್ನು ಇಲ್ಲಿ ನೀಡಲಾಗಿದೆ. ದೂರು ದಾಖಲಿಸುವವರು ಅಪಘಾತವಾದ ವಾಹನಗಳ ರಿಜಿಸ್ಟ್ರೇಶನ್ ನಂಬರ್ ಜೊತೆಗೆ ಅಪಘಾತದ ಸ್ಥಳವನ್ನ ಆಯ್ಕೆ ಮಾಡಬೇಕು. ಅಪಘಾತದ ದಿನಾಂಕ, ಘಟನೆ ಹೇಗೆ ಆಯಿತು ಎಂಬ ವಿವರಣೆ ಒಳಗೊಂಡ ಅಪಘಾತವಾದ ವಾಹನಗಳ ಫೋಟೋ ಅಪ್ಲೋಡ್ ಮಾಡಬೇಕು. ಹೆಸರು, ದೂರವಾಣಿ ಸಂಪರ್ಕ ಸಂಖ್ಯೆಯನ್ನು ದಾಖಲಿಸಿ ರಿಪೋರ್ಟ್ ಸಬ್ಮಿಟ್ ಮಾಡಿದರೆ ನಿಮ್ಮ ದೂರು ದಾಖಲಾಗಲಿದೆ.