ಕೈಬರಹದಿಂದ ಖಚಿತಗೊಂಡ ಆರೋಪ: ನಿಟ್ಟೆ ವಿದ್ಯಾರ್ಥಿನಿಗೆ ಜಾಮೀನು

ಉಡುಪಿ: ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಶೌಚಾಲಯದ ಗೋಡೆಯ ಮೇಲೆ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿ ಬರಹ ಬರೆದ ವಿದ್ಯಾರ್ಥಿನಿಯನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಆರೋಪಿ ಫಾತಿಮಾ ಶಬ್ದಾ (21) ಬಂಧಿತ ವಿದ್ಯಾರ್ಥಿನಿ.

ಮೇ7 ರಂದು ಸಂಜೆ 7 ಗಂಟೆಗೆ ವಸತಿ ನಿಲಯದ ಮೊದಲ ಮಹಡಿಯ ಶೌಚಾಲಯದ ಗೋಡೆಯ ಮೇಲೆ ಅಶ್ಲೀಲ ಪದಗಳನ್ನು ಬಳಸಿ ಪ್ರಚೋದನಕಾರಿಯಾಗಿ ಬರಹ ಬರೆಯಲಾಗಿತ್ತು. ವಸತಿ ನಿಲಯದ ವಿದ್ಯಾರ್ಥಿನಿಯರೇ ಈ ಕೃತ್ಯ ಎಸಗಿದ್ದಾರೆಂದು ನಂಬಲಾಗಿತ್ತು.
ಈ ಬಗ್ಗೆ ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಮ್ಯಾನೇಜರ್ ಕಾರ್ಕಳ ಪೊಲೀಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ್ದರು. ಆದರೆ, ಸರಿಯಾದ ಸಾಕ್ಷ್ಯ ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸರು ಕೈಬರಹ ತಜ್ಞರ ಸಹಾಯದಿಂದ ವಸತಿ ನಿಲಯದಲ್ಲಿನ ವಿದ್ಯಾರ್ಥಿನಿಗಳ ಅಸೈನ್ಮೆಂಟ್ಸ್ ಹಾಗೂ ಮತ್ತೊಮ್ಮೆ ಗೋಡೆ ಬರೆಸುವ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದರು. ಕೇರಳ ಕಾಸರಗೋಡು ಜಿಲ್ಲೆಯ ನಿವಾಸಿ ಫಾತಿಮಾ ಶಬ್ದಾಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಸದ್ಯ ಆರೋಪಿ ಫಾತಿಮಾ ಶಬ್ದಾಗೆ ಜಾಮೀನು ಮಂಜೂರು ಮಾಡಿದೆ.
