ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ನಿಂದ ಕೊಲೆ ಬೆದರಿಕೆ: ಹಿಜಾಬ್ ವಿವಾದಕ್ಕೆ ಅಂತರಾಷ್ಟ್ರೀಯ ತಿರುವು; ಪಾಟ್ನಾದಲ್ಲಿ ಹೈ ಅಲರ್ಟ್!

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಯುವ ವೈದ್ಯೆಯೊಬ್ಬರ ಹಿಜಾಬ್ ಎಳೆದ ಘಟನೆ ಈಗ ಕೇವಲ ರಾಜಕೀಯ ವಿವಾದವಾಗಿ ಉಳಿಯದೆ, ಅಂತರಾಷ್ಟ್ರೀಯ ಮಟ್ಟದ ಭದ್ರತಾ ಆತಂಕಕ್ಕೆ ಕಾರಣವಾಗಿದೆ. ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಸಂದರ್ಭದಲ್ಲಿ ವೇದಿಕೆಯ ಮೇಲೆ ನಿತೀಶ್ ಕುಮಾರ್ ಅವರು ಮಹಿಳಾ ವೈದ್ಯೆಯ ಮುಖದಿಂದ ಹಿಜಾಬ್ ಎಳೆದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಈ ಘಟನೆಯನ್ನು ವಿರೋಧ ಪಕ್ಷವಾದ ಆರ್‌ಜೆಡಿ ತೀವ್ರವಾಗಿ ಖಂಡಿಸಿತ್ತಾದರೂ, ಮುಖ್ಯಮಂತ್ರಿಗಳಿಂದ ಯಾವುದೇ ಸ್ಪಷ್ಟನೆ ಬಂದಿರಲಿಲ್ಲ.


ಇದೀಗ ಈ ವಿವಾದ ಪಾಕಿಸ್ತಾನದ ಅಂಗಳ ತಲುಪಿದ್ದು, ಶಹಜಾದ್ ಭಟ್ಟಿ ಎಂಬ ಪಾಕಿಸ್ತಾನಿ ಮೂಲದ ಗ್ಯಾಂಗ್‌ಸ್ಟರ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ನಿತೀಶ್ ಕುಮಾರ್ ಅವರಿಗೆ ನೇರ ಬೆದರಿಕೆ ಹಾಕಿದ್ದಾನೆ. “ಹಿಜಾಬ್ ವಿಷಯದಲ್ಲಿ ನೀವು ದೊಡ್ಡ ತಪ್ಪು ಮಾಡಿದ್ದೀರಿ, ಕೂಡಲೇ ಆ ಯುವತಿಯ ಬಳಿ ಕ್ಷಮೆಯಾಚಿಸದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಆತ ಎಚ್ಚರಿಕೆ ನೀಡಿದ್ದು, ಇದು ಬಿಹಾರ ಸರ್ಕಾರದ ನಿದ್ದೆಗೆಡಿಸಿದೆ.

ಈ ಬೆದರಿಕೆ ವಿಡಿಯೋ ಹೊರಬಂದ ತಕ್ಷಣವೇ ಎಚ್ಚೆತ್ತ ಪಾಟ್ನಾ ಪೊಲೀಸರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಖ್ಯಮಂತ್ರಿಗಳ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿದ್ದಾರೆ. ಪಾಕಿಸ್ತಾನದ ಭೂಗತ ಜಗತ್ತಿನ ಲಿಂಕ್ ಈ ಪ್ರಕರಣದಲ್ಲಿ ಕಂಡುಬಂದಿರುವುದರಿಂದ ಕೇಂದ್ರ ಗುಪ್ತಚರ ಸಂಸ್ಥೆಗಳೂ ತನಿಖೆಯಲ್ಲಿ ತೊಡಗಿವೆ. ಶಹಜಾದ್ ಭಟ್ಟಿ ತನ್ನ ವಿಡಿಯೋದಲ್ಲಿ, “ನಾನು ಮೊದಲೇ ಎಚ್ಚರಿಕೆ ನೀಡುತ್ತಿದ್ದೇನೆ, ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಹೇಳಲಿಲ್ಲ ಎಂದು ದೂರಬೇಡಿ” ಎಂದು ಉದ್ಧಟತನದ ಮಾತುಗಳನ್ನು ಆಡಿದ್ದಾನೆ. ಈ ಬೆಳವಣಿಗೆಯಿಂದಾಗಿ ಬಿಹಾರದ ರಾಜಕೀಯ ವಾತಾವರಣ ಮತ್ತಷ್ಟು ಕಾವೇರಿದ್ದು, ಒಂದು ಕಡೆ ಮಹಿಳಾ ಘನತೆಯ ಪ್ರಶ್ನೆ ಮತ್ತು ಇನ್ನೊಂದೆಡೆ ಮುಖ್ಯಮಂತ್ರಿಗಳ ಜೀವಕ್ಕೆ ಎದುರಾಗಿರುವ ಬೆದರಿಕೆ ಸರ್ಕಾರದ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯ ಸೈಬರ್ ತಜ್ಞರು ಈ ವಿಡಿಯೋದ ಮೂಲ ಮತ್ತು ಅದನ್ನು ಹಂಚಿಕೊಂಡ ಜಾಲದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.
