ರಾಜಸ್ಥಾನ ಎನ್‌ಎಚ್ 68ರಲ್ಲಿ ಬಸ್-ಬೈಕ್ ಅಪಘಾತ- ಹೊತ್ತಿ ಉರಿದ ಬಸ್

ರಾಜಸ್ಥಾನ: ಜಾಲೋರ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-68ರಲ್ಲಿ ಮಂಗಳವಾರದ ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಸ್ಲೀಪರ್ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಗೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ಮೂಲಗಳ ಪ್ರಕಾರ, ಅಪಘಾತ ಸಂಭವಿಸಿದ ಕ್ಷಣದಲ್ಲೇ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದು, ಪಕ್ಕದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಅವರನ್ನು ಬಸ್‌ನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬಸ್ ಬೆಂಕಿಯಲ್ಲಿ ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ತಕ್ಷಣವೇ ಧಾವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
