ನವಜಾತ ಶಿಶುವಿಗೆ ಹೃದಯಾಘಾತ: ಬೆಂಗಳೂರಿನಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಕರೆತಂದರೂ ಚಿಕಿತ್ಸೆ ಫಲಿಸದೆ ಸಾವು!

ಹಾಸನ: ಹೃದಯ ಬಡಿತ ತೀವ್ರವಾಗಿ ಹೆಚ್ಚಿರುವ ಬೆನ್ನಲ್ಲೇ ಇದೀಗ ನವಜಾತ ಶಿಶುವಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಹಾಸನದ ರಘು ಮತ್ತು ಸುಷ್ಮಾ ದಂಪತಿಯ ಪುಟ್ಟ ಕಂದಮ್ಮನಿಗೆ ಕೆಲ ದಿನಗಳ ಹಿಂದೆ ಹೃದಯ ಸಂಬಂಧಿತ ತೊಂದರೆ ಕಾಣಿಸಿಕೊಂಡಿತು. ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಪೋಷಕರು ತಕ್ಷಣವೇ ತೀವ್ರ ಚಿಕಿತ್ಸೆಗೆಂದು ಹಾಸನದಿಂದ ಬೆಂಗಳೂರಿಗೆ ಮಗುವನ್ನು ಕರೆತಂದರು.

ಮಗು ಬಾಳಿ ಬೆಳಗಬೇಕು ಎಂಬ ನಂಬಿಕೆಯಿಂದ, ಝೀರೋ ಟ್ರಾಫಿಕ್ ವ್ಯವಸ್ಥೆ ರೂಪಿಸಿ ಮೂರು ಗಂಟೆಗಳಲ್ಲಿ ಹಾಸನದಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆತರಲಾಗಿತ್ತು. ವೈದ್ಯರು ಕೂಡ ತಕ್ಷಣ ಚಿಕಿತ್ಸೆ ಆರಂಭಿಸಿದರು. ಆದರೂ, ತೀವ್ರವಾದ ಹೃದಯಾಘಾತಕ್ಕೆ ಒಳಗಾದ ಮಗುವಿನ ಆರೋಗ್ಯ ಸ್ಥಿರವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಪುಟ್ಟ ಕಂದಮ್ಮನು ವಿಧಿವಶನಾಗಿದ್ದಾನೆ ಎಂದು ವೈದ್ಯರು ದೃಢಪಡಿಸಿದರು.
ಈ ದುರ್ಘಟನೆ ಹೃದಯವಿದಾರಕವಾಗಿದ್ದು, ಶಿಶುವನ್ನು ಕಳೆದುಕೊಂಡ ಪೋಷಕರು ಶೋಕಸಾಗರದಲ್ಲಿ ಮುಳುಗಿದ್ದಾರೆ. ನವಜಾತ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರತೆ ಅಗತ್ಯವಿದೆ ಎಂಬ ಪಾಠವನ್ನೂ ಈ ಘಟನೆ ಕಲಿಸಿದೆ.
ಹೃದಯಾಘಾತಕ್ಕೆ ಶಿಕ್ಷಕ ಸಾವು
ಕೊಪ್ಪಳ: ಹೃದಯಾಘಾತದ ಕಾರಣಕ್ಕೆ ಮತ್ತೊಬ್ಬ ಶಿಕ್ಷಕ ತನ್ನ ಪ್ರಾಣ ಕಳೆದುಕೊಂಡಿರುವ ದುಃಖದ ಸುದ್ದಿ ಹೊರಬಿದ್ದಿದೆ. ಕೊಪ್ಪಳ ತಾಲ್ಲೂಕಿನ ಬಹದ್ದೂರ ಬಂಡಿ ಗ್ರಾಮದ ಶಾಂತವೀರಸ್ವಾಮಿ ಗಂಗಾಧರ ಮಠ ಅವರು ಇಂದು ಬೆಳಗಿನ ಜಾವ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶಾಂತವೀರಸ್ವಾಮಿ ಗಂಗಾಧರ ಮಠ ಅವರು ಗಂಗಾವತಿ ತಾಲೂಕಿನ ಹಿರೇಬೆನಕಲ್ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿದ್ದವರಲ್ಲದೆ, ಯೋಗ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
ಈ ಸಾವಿನಿಂದ ಶಿಕ್ಷಣ ಕ್ಷೇತ್ರದವರಲ್ಲಿ ಶೋಕವಾತಾವರಣ ನಿರ್ಮಾಣವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಈವರೆಗೂ ಜಿಲ್ಲೆಯಲ್ಲಿಯೇ ಐವರು ಹೃದಯಾಘಾತಕ್ಕೆ ಬಲಿಯಾಗಿದ್ದು, ಕೇವಲ ಎರಡು ದಿನಗಳಲ್ಲಿ ಮೂವರು ಮೃತಪಟ್ಟಿರುವುದು ಗಂಭೀರ ಚಿಂತೆ ಹೆಚ್ಚಿಸಿದೆ, ಆರೋಗ್ಯ ಸನ್ನಿವೇಶದ ಕುರಿತು ಜಾಗೃತಿ ಅವಶ್ಯಕತೆ ಎತ್ತಿ ತೋರಿಸುತ್ತಿದೆ.
