ಮಡಿಕೇರಿಯಲ್ಲಿ ನಿರ್ಜನ ಮನೆಯಲ್ಲಿ ನವಜಾತ ಶಿಶು ಪತ್ತೆ!

ಮಡಿಕೇರಿ : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಮಾವಟ್ಟಿ ಪೇರೂರು ಗ್ರಾಮದ ತೋಟದ ಲೈನ್ ಮನೆಯೊಂದರಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ.

ಯಾರೂ ವಾಸವಿಲ್ಲದ ಮನೆಯಲ್ಲಿ ಶನಿವಾರ ರಾತ್ರಿ ಹೆಣ್ಣು ಶಿಶು ಪತ್ತೆಯಾಗಿದ್ದು, ಕೇವಲ ಒಂದೆರಡು ಗಂಟೆಗಳ ಹಿಂದೆ ಇದು ಜನಿಸಿದೆ ಎಂದು ಹೇಳಲಾಗಿದೆ.
ಯಾರೂ ವಾಸವಿಲ್ಲದ ಲೈನ್ ಮನೆಯಲ್ಲಿ ಬಟ್ಟೆಯಲ್ಲಿ ಸುತ್ತಿದ್ದ ಶಿಶುವನ್ನು ಇರುವೆಗಳು ಸುತ್ತುವರೆದಿದ್ದವು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ನಾಪೋಕ್ಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.