ನ್ಯೂಯಾರ್ಕ್ಗೆ 34 ವರ್ಷದ ನೂತನ ಮೇಯರ್: ಇತಿಹಾಸ ಸೃಷ್ಟಿಸಿದ ಪ್ರಥಮ ಭಾರತೀಯ-ಅಮೆರಿಕನ್ ಮುಸ್ಲಿಂ ಜೊಹ್ರಾನ್ ಮಾಮ್ದಾನಿ

ವಾಷಿಂಗ್ಟನ್/ನ್ಯೂಯಾರ್ಕ್: ಅಮೆರಿಕದಲ್ಲಿ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವಾಗಿದೆ. 34 ವರ್ಷದ ಜೊಹ್ರಾನ್ ಮಾಮ್ದಾನಿ (Zohran Mamdan) ನ್ಯೂಯಾರ್ಕ್ ನಗರದ ನೂತನ ಮೇಯರ್ (New York Mayor) ಆಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ವ್ಯಾಪಾರ ಯುದ್ಧದ ನಡುವೆಯೂ ಫಸ್ಟ್ ಟೈಂ ಭಾರತೀಯ-ಅಮೆರಿಕನ್ ಮುಸ್ಲಿಂ (First Indian-American Muslim) ಒಬ್ಬರು ಮೇಯರ್ ಆಗಿ ಆಯ್ಕೆಯಾಗಿರುವುದು ಐತಿಹಾಸಿಕ ಗೆಲುವಾಗಿದೆ.

ಡೆಮಾಕ್ರಟಿಕ್ (Democratic) ಸೋಷಿಯಲಿಸ್ಟ್ ಪಕ್ಷದ ಪ್ರಮುಖ ಅಭ್ಯರ್ಥಿ ಮಮ್ದಾನಿ ಚುನಾವಣೆಯಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವಲ್ಲಿ ಉಶಸ್ವಿಯಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿಯೂ ಆಗಿರುವ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಪಕ್ಷದ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ.
ಈ ಗೆಲುವಿನೊಂದಿಗೆ ಮಮ್ದಾನಿ ನ್ಯೂಯಾರ್ಕ್ ನಗರದ ಮೊದಲ ಭಾರತೀಯ-ಅಮೆರಿಕನ್ ಮುಸ್ಲಿಂ ಮೇಯರ್, ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಹಾಗೂ ಆಫ್ರಿಕಾದಲ್ಲಿ ಜನಿಸಿದ ಮೊದಲ ಮೇಯರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
2026ರ ಜನವರಿ 1 ರಂದು ವಿಶ್ವದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಅಮೆರಿಕದ ನ್ಯೂಯಾರ್ಕ್ ನಗರದ ಮೇಯರ್ ಆಗಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಕೇವಲ 34ನೇ ವರ್ಷಕ್ಕೆ ಈ ಹುದ್ದೆಗೇರುವ ಮೂಲಕ ಅವರು ಕಳೆದ ಒಂದು ಶತಮಾನದಲ್ಲೇ ಈ ಹುದ್ದೆಗೇರಿದ ಅತ್ಯಂತ ಕಿರಿಯ ವಯಸ್ಸಿಗ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ನ್ಯೂಯಾರ್ಕ್ ನಗರವು 85 ಲಕ್ಷ ಜನಸಂಖ್ಯೆ ಹೊಂದಿದ್ದು, ಮೇಯರ್ ಚುನಾವಣೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ. ಈದು 1969ರ ಬಳಿಕ ಮೇಯರ್ ಚುನಾವಣೆಗೆ ನಡೆದ ಹೆಚ್ಚಿನ ಮತದಾನವಾಗಿದೆ.