ಆಂಧ್ರದಲ್ಲಿ ಚಿತ್ರಮಂದಿರಗಳ ಹೊಸ ಬಳಕೆ: ಪವನ್ ಕಲ್ಯಾಣ್‌ನಿಂದ ಗ್ರಾಮ ಸಭೆ ಮಾದರಿಯ ಕಾರ್ಯಕ್ರಮ

ಆಂಧ್ರ ಪ್ರದೇಶ : ಇರುವುದು ಮನರಂಜನೆಗೆ, ಸಿನಿಮಾ ವೀಕ್ಷಣೆಗೆ ಇತ್ತೀಚೆಗೆ ಅಲ್ಲಲ್ಲಿ ಚಿತ್ರಮಂದಿರಗಳಲ್ಲಿ ಕ್ರಿಕೆಟ್ ಪ್ರದರ್ಶನ ಸಹ ನಡೆದಿದೆ. ಒಟ್ಟಾರೆಯಾಗಿ ಚಿತ್ರಮಂದಿರಗಳನ್ನು ಕೇವಲ ಮನರಂಜನೆಗಾಗಿ ಮಾತ್ರವೇ ಬಳಸಲಾಗುತ್ತಿದೆ. ಆದರೆ ಇದೀಗ ಚಿತ್ರಮಂದಿರಗಳನ್ನು ಆಡಳಿತಕ್ಕಾಗಿ ಬಳಸು ಆಲೋಚನೆ ಆಂಧ್ರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರಿಗೆ ಬಂದಿದೆ.

ಇದೇ ಗುರುವಾರ ಪವನ್ ಕಲ್ಯಾಣ್ ಅವರ ಈ ಹೊಸ ಯೋಜನೆ ಲಾಂಚ್ ಆಗುತ್ತಿದೆ.
‘ಮನ ಊರು ಮಾಟ-ಮಂಚಿ ಮಾಟ’ (ನಮ್ಮ ಊರ ಮಾತು, ಒಳ್ಳೆ ಮಾತು) ಎಂಬ ಹೊಸ ಕಾರ್ಯಕ್ರಮವನ್ನು ಪವನ್ ಕಲ್ಯಾಣ್ ಲಾಂಚ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಡಿಸಿಎಂ ಪವನ್ ಕಲ್ಯಾಣ್. ಈ ಕಾರ್ಯಕ್ರಮ ಗ್ರಾಮ ಸಭೆ ಮಾದರಿಯ ಕಾರ್ಯಕ್ರಮ ಆಗಿದ್ದು, ಈ ಕಾರ್ಯಕ್ರಮದಡಿ ಆಂಧ್ರ ಪ್ರದೇಶದ ಗ್ರಾಮವಾಸಿಗಳ ಕುಂದು-ಕೊರತೆಗಳನ್ನು ಆಲಿಸಲಿದ್ದಾರೆ ಪವನ್ ಕಲ್ಯಾಣ್.
ಹಾಗೆಂದು ಪವನ್ ಕಲ್ಯಾಣ್ ಯಾವುದೇ ಗ್ರಾಮಕ್ಕೆ ಭೇಟಿಗೆ ಹೋಗುವುದಿಲ್ಲ. ಬದಲಿಗೆ ಮಂಗಳಗಿರಿಯ ತಮ್ಮ ಕಚೇರಿಯಲ್ಲಿಯೇ ಕೂತು ವಿಡಿಯೋ ಕಾನ್ಫರೆನ್ಸ್ ಮೂಲಕ ಆಂಧ್ರದ ಹಳ್ಳಿಗರೊಟ್ಟಿಗೆ ಮಾತನಾಡಲಾಗಿದ್ದಾರೆ. ಗ್ರಾಮಸ್ಥರು ಸ್ಥಳೀಯ ಚಿತ್ರಮಂದಿರಗಳಿಗೆ ಭೇಟಿ ನೀಡಿದರೆ ಅಲ್ಲಿ ಪವನ್ ಕಲ್ಯಾಣ್ರ ವಿಡಿಯೋ ಕಾನ್ಫರೆನ್ಸ್ ಅನ್ನು ವೀಕ್ಷಿಸಬಹುದು ಮತ್ತು ಸಕ್ರಿಯವಾಗಿ ಭಾಗಿ ಆಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು, ಸ್ಥಳದಲ್ಲಿಯೇ ಪರಿಹಾರವನ್ನು ಪಡೆಯಬಹುದಾಗಿರುತ್ತದೆ.
ಗುರುವಾರದಂದು ಈ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದು ಮೊದಲನೇಯದಾಗಿ ಶ್ರೀಕಾಕುಲಂ ಜಿಲ್ಲೆಯ ರಾವಿವಾಸಲ ಗ್ರಾಮದ ಜನರೊಟ್ಟಿಗೆ ಪವನ್ ಕಲ್ಯಾಣ್ ಚರ್ಚೆ ಮಾಡಲಿದ್ದಾರೆ. ಈ ಕಾರ್ಯಕ್ರಮ ತೆಕ್ಕಲಿಯ ಭವಾನಿ ಥಿಯೇಟರ್ನಲ್ಲಿ ನಡೆಯಲಿದೆ. ಸುಮಾರು 300 ಮಂದಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಈ ವೇಳೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿದ್ದಾರೆ.
ಈ ಹಿಂದೆ ಪವನ್ ಕಲ್ಯಾಣ್ರ ಸಿನಿಮಾ ನೋಡಿ ಚಪ್ಪಾಳೆ, ಶಿಳ್ಳೆ ಹೊಡೆಯಲು ಜನ ಚಿತ್ರಮಂದಿರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪವನ್ ಕಲ್ಯಾಣ್ ಜೊತೆ ಮಾತನಾಡಲು, ಅವರ ಬಳಿ ಕಷ್ಟ ಹೇಳಿಕೊಂಡು ಪರಿಹಾರ ಪಡೆದುಕೊಳ್ಳಲು ಜನ ಚಿತ್ರಮಂದಿರಕ್ಕೆ ಹೋಗಲಿದ್ದಾರೆ. ಆಂಧ್ರ ಪ್ರದೇಶ ರಾಜ್ಯದಾದ್ಯಂತ ಈ ಕಾರ್ಯಕ್ರಮ ಮಾಡಲಿಚ್ಛಿಸಿದ್ದು ಚಿತ್ರಮಂದಿರಗಳೇ ಪವನ್ ಕಲ್ಯಾಣ್ರ ಈ ಕಾರ್ಯಕ್ರಮದ ಮುಖ್ಯ ವೇದಿಕೆ ಆಗಲಿವೆ.
