ಯುಪಿಐ ಪಾವತಿಯನ್ನು ಇಎಂಐಗೆ ಪರಿವರ್ತಿಸುವ ಹೊಸ ಆಯ್ಕೆ!

ನವದೆಹಲಿ: ಭಾರತದ ನಂಬರ್ ಒನ್ ಪೇಮೆಂಟ್ ಸಿಸ್ಟಂ ಆಗಿರುವ ಯುಪಿಐ (UPI) ಆಗಾಗ್ಗೆ ಹೊಸ ಹೊಸ ಫೀಚರ್ಸ್ ಸೇರಿಸಿಕೊಳ್ಳುತ್ತಲೇ ಇರುತ್ತದೆ. ಯುಪಿಐನಲ್ಲಿ ರುಪೇ ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಲೈನ್, ಫ್ಯಾಮಿಲಿ ಶೇರಿಂಗ್ ಇತ್ಯಾದಿ ಹಲವಾರು ಫೀಚರ್ಗಳನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಇತ್ತೀಚೆಗೆ ಸೇರಿಸಿತ್ತು. ಇದೀಗ ಕ್ರೆಡಿಟ್ ಕಾರ್ಡ್ಗಳಲ್ಲಿ ಸಿಗುವ ರೀತಿಯಲ್ಲಿ ಯುಪಿಐ ಪಾವತಿಯನ್ನೂ ಇಎಂಐಗಳಾಗಿ ವಿಭಜಿಸುವ ಒಂದು ಅವಕಾಶ ನೀಡಲು ಎನ್ಪಿಸಿಐ ಯೋಜಿಸುತ್ತಿದೆ.

ಈ ರೀತಿ ಯುಪಿಐ ಪೇಮೆಂಟ್ ಅನ್ನು ಸ್ಪ್ಲಿಟ್ ಮಾಡುವ ಫೀಚರ್ ಇನ್ನೂ ಪ್ರಸ್ತಾಪದ ಹಂತದಲ್ಲಿದ್ದು, ಇದು ಜಾರಿಯಾದರೆ, ಪೇಟಿಎಂ, ಫೋನ್ ಪೇ, ಕ್ರೆಡ್ ಇತ್ಯಾದಿ ಫಿನ್ಟೆಕ್ ಪ್ಲಾಟ್ಫಾರ್ಮ್ಗಳು ಯುಪಿಐ ಪೇಮೆಂಟ್ನಲ್ಲಿ ಇಎಂಐ ಆಪ್ಷನ್ಸ್ ಒದಗಿಸಬಹುದು.
ಗ್ರಾಹಕರು ಯುಪಿಐ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುವ ಸಂದರ್ಭದಲ್ಲೇ ಇಎಂಐ ಅವಕಾಶ ನೀಡಲಾಗುತ್ತದೆ. ಪಿಒಎಸ್ ಮೆಷಿನ್ನಲ್ಲಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವಾಗ ಪೇಮೆಂಟ್ ಸ್ಪ್ಲಿಟ್ ಮಾಡುವ ರೀತಿಯಲ್ಲಿ ಯುಪಿಐನಲ್ಲೂ ಅಳವಡಿಸಲಾಗಬಹುದು.
ಇಎಂಐ ಫೀಚರ್ನಿಂದ ಬ್ಯಾಂಕು ಹಾಗೂ ಫಿನ್ಟೆಕ್ಗಳಿಗೂ ಲಾಭದ ಅವಕಾಶ
ಇಎಂಐ ಆಪ್ಷನ್ನಲ್ಲಿ ಶೇ. 1.5ರಷ್ಟು ಇಂಟರ್ಮಿಟೆಂಟ್ ಫೀ ಹಾಕಲು ಎನ್ಪಿಸಿಐ ಯೋಜಿಸಿದೆ. ಇದು ಫಿನ್ಟೆಕ್ ಅ್ಯಪ್ಗಳು ಹಾಗೂ ಬ್ಯಾಂಕುಗಳಿಗೆ ಆದಾಯ ಗಳಿಸಲು ಒಳ್ಳೆಯ ಮಾರ್ಗವೆನಿಸಲಿದೆ. ಯುಪಿಐನಲ್ಲಿ ಹೆಚ್ಚಿನ ವಹಿವಾಟುಗಳಿಂದ ಯಾರಿಗೂ ಸದ್ಯಕ್ಕೆ ಲಾಭ ಸಿಗುತ್ತಿಲ್ಲ. ಸ್ಪ್ಲಿಟ್ ಪೇಮೆಂಟ್ನಲ್ಲಿ ವಿಧಿಸುವ ಇಂಟರ್ಮಿಟೆಂಟ್ ಫೀ ಒಂದು ಆದಾಯ ಮೂಲ ಸೃಷ್ಟಿಸಬಹುದು.
ಈಗಾಗಲೇ ವಿವಿಧ ಬ್ಯಾಂಕುಗಳು ಪೇಟಿಎಂ, ನವಿಯಂತಹ ಫಿನ್ಟೆಕ್ ಕಂಪನಿಗಳ ಜೊತೆ ಟೈಯಪ್ ಮಾಡಿಕೊಂಡು ಬಳಕೆದಾರರಿಗೆ ಕ್ರೆಡಿಟ್ ಲೈನ್ ಆಫರ್ ಮಾಡುತ್ತಿವೆ. ಇಎಂಐ ವಿಚಾರದಲ್ಲೂ ಇದೇ ಬೆಳವಣಿಗೆ ಆಗಬಹುದು.
ಈ ಇಎಂಐ ಫೀಚರ್ ದೊಡ್ಡ ಪ್ರಮಾಣದ ಪೇಮೆಂಟ್ಗೆ ಅನುಕೂಲವಾಗಲಿದೆ. ದೊಡ್ಡ ಪೇಮೆಂಟ್ಗಳಿಗೆ ಕ್ರೆಡಿಟ್ ಕಾರ್ಡ್ ಬಳಸುತ್ತಿರುವವರು ಯುಪಿಐನಲ್ಲೇ ಪೇಮೆಂಟ್ ಮಾಡಬಹುದು. ಇದರಿಂದ ಯುಪಿಐ ಬಳಕೆ ಮತ್ತಷ್ಟು ಹೆಚ್ಚಲಿದೆ. ಹೆಚ್ಚಿನ ಮೊತ್ತದ ಪೇಮೆಂಟ್ನಲ್ಲೂ ಯುಪಿಐ ಮೇಲುಗೈ ಸಾಧಿಸಲು ಸಾಧ್ಯವಾಗಲಿದೆ.