ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ ಹೊಸ ಕಾನೂನು: ಕಂಟೆಂಟ್ ಕ್ರಿಯೇಟರ್ಸ್ ಮೇಲೆ ಏನು ಪರಿಣಾಮ?

ಎಐ (AI) ಬಳಸಿ ಅರೆ ಕ್ಷಣದಲ್ಲಿ ನಿಮಗೆ ಬೇಕಾದ ಫೋಟೋ, ವಿಡಿಯೋ ತಯಾರಿಸ್ಬಹುದು. ಸ್ಪಷ್ಟವಾಗಿ ಎಐ ನಿಮಗೆ ಫೋಟೋ, ವಿಡಿಯೋಗಳನ್ನು ನೀಡುವುದ್ರಿಂದ ಕೆಲವೊಂದು ವಿಡಿಯೋಗಳ ಸತ್ಯಾಸತ್ಯತೆ ತಿಳಿಯೋದು ಕಷ್ಟ. ಈಗ ಗೂಗಲ್ ಜೆಮಿನಿ ಅಪ್ಲಿಕೇಷನ್ ಟ್ರೆಂಡ್ ಜೋರಾಗಿದೆ. ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್ (content creators) ಕೆಲ್ಸವನ್ನು ಈ ಎಐ ಸುಲಭ ಮಾಡಿದೆ. ಒಂದು ಕಥೆ ವಿಡಿಯೋ ಮಾಡ್ಬೇಕು ಅಂದ್ರೆ ಕಥೆಯಿಂದ ಹಿಡಿದು ವೈಸ್ ಓವರ್ ಜೊತೆ ವಿಡಿಯೋ ಸಿದ್ಧ ಮಾಡಿ, ಅದಕ್ಕೆ ಬೇಕಾದ ಟ್ಯಾಗ್ಸ್, ಹೈಪರ್ ಲಿಂಕ್ ಕೂಡ ಎಐ ನೀಡುತ್ತೆ. ಎಐ ಬಳಸಿಕೊಂಡು ಅನೇಕ ಕಂಟೆಂಟ್ ಕ್ರಿಯೇಟರ್ಸ್, ಇನ್ಸ್ಟಾಗ್ರಾಮ್, ಯುಟ್ಯೂಬ್, ಫೇಸ್ಬುಕ್ ನಲ್ಲಿ ವಿಡಿಯೋಗಳನ್ನು ಹಾಕಿ ಫೇಮಸ್ ಆಗ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಂಪಾದನೆ ಕೂಡ ಮಾಡ್ತಿದ್ದಾರೆ. ಆದ್ರೀಗ ಎಐ ಬಳಸಿ ಕಂಟೆಂಟ್ ಕ್ರಿಯೇಟ್ ಮಾಡೋದು ಸುಲಭ ಅಲ್ಲ. ಇನ್ಮುಂದೆ ಇದಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ.

ಎಐ ದುರುಪಯೋಗ : ಡಿಜಿಟಲ್ ಬಳಕೆ ಹೆಚ್ಚಾಗ್ತಿದ್ದಂತೆ ಅದ್ರ ದುರುಪಯೋಗ ಕೂಡ ಹೆಚ್ಚಾಗ್ತಿದೆ. ಅನೇಕ ಸೆಲೆಬ್ರಿಟಿಗಳ ಫೋಟೋಗಳನ್ನು ಬಳಸಿಕೊಂಡು ಮೋಸ ಮಾಡ್ತಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬರ್ತಿದೆ. ಬರೀ ಸೆಲೆಬ್ರಿಟಿಗಳು ಮಾತ್ರವಲ್ಲ ಸಾಮಾನ್ಯ ಜನರ ಫೋಟೋ, ವಿಡಿಯೋಗಳೂ ದುರ್ಬಳಕೆ ಆಗ್ತಿವೆ. ಎಐ ಮೂಲಕ ಜನರ ದಾರಿತಪ್ಪಿಸುವ ಕೆಲ್ಸ ನಡೆಯುತ್ತಿದೆ. ವಿಡಿಯೋ, ಫೋಟೋಗಳನ್ನು ನೋಡಿ ಇದು ಎಐ ಬಳಸಿ ಮಾಡಿದ ವಿಡಿಯೋ ಎಂಬುದನ್ನು ಸುಲಭವಾಗಿ ಪತ್ತೆಮಾಡಲು ಸಾಧ್ಯವಾಗ್ತಿಲ್ಲ. ಇದ್ರಿಂದ ಜನರಿಗೆ ತಪ್ಪು ಸಂದೇಶ ರವಾನೆ ಆಗ್ತಿದೆ.
ಹೊಸ ನಿಯಮ ಜಾರಿಗೆ ಚಿಂತನೆ : ಎಐ ದುರ್ಬಳಕೆ ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರಕ್ಕೆ ಚಿಂತನೆ ನಡೆಸಿದೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸ್ಥಾಯಿ ಸಮಿತಿಯು ಲೋಕಸಭಾ ಸ್ಪೀಕರ್ಗೆ ತನ್ನ ವರದಿಯನ್ನು ಸಲ್ಲಿಸಿದೆ. ಎಐ ಮೂಲಕ ನಕಲಿ ಸುದ್ದಿಗಳನ್ನು ಹರಡುವ ಜನರು ಮತ್ತು ಕಂಪನಿಗಳನ್ನು ಗುರುತಿಸಲು ಮತ್ತು ವಿಚಾರಣೆಗೆ ಒಳಪಡಿಸಲು ಕಠಿಣ ತಾಂತ್ರಿಕ ಮತ್ತು ಕಾನೂನು ನಿಯಮಗಳು ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಂಪನಿಗಳು ಮತ್ತು ಜನರು ಹರಡುವ ನಕಲಿ ಸುದ್ದಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುವುದಲ್ಲದೆ, ಜನರನ್ನು ಗೊಂದಲಗೊಳಿಸುತ್ತದೆ ಎಂದು ಸಮಿತಿ ಹೇಳಿದೆ. ಎಐ ಬಳಸಿ ಕಂಟೆಂಟ್ ಕ್ರಿಯೆಟ್ ಮಾಡಲು ಪರವಾನಗಿಗಳನ್ನು ಕಡ್ಡಾಯಗೊಳಿಸಬೇಕು ಮತ್ತು ಎಐ ರಚಿತ ವಿಷಯದ ಲೇಬಲಿಂಗ್ ಕಡ್ಡಾಯಗೊಳಿಸಬೇಕು ಎಂದು ಸಮಿತಿ ಹೇಳಿದೆ.
ಕಂಟೆಂಟ್ ಕ್ರಿಯೇಟರ್ಸ್ ಗೆ ಇದ್ರಿಂದ ಆಗುವ ಪರಿಣಾಮ ಏನು ? : ನಕಲಿ ಸುದ್ದಿಗಳನ್ನು ತಡೆಗೆ ಸಂಬಂಧಿಸಿದಂತೆ ಸಮಿತಿ ಸರ್ಕಾರಕ್ಕೆ ಶಿಫಾರಸು ಕಳುಹಿಸಿದೆ. ಅದಿನ್ನೂ ಕಾನೂನು ರೂಪದಲ್ಲಿ ಜಾರಿಗೆ ಬಂದಿಲ್ಲ. ಒಂದ್ವೇಳೆ ಕಾನೂನು ರೂಪದಲ್ಲಿ ಜಾರಿಗೆ ಬಂದ್ರೆ, ಹೆಚ್ಚಿನ ವೀವ್ಸ್ ಗಾಗಿ ಕಂಟೆಂಟ್ ಕ್ರಿಯೇಟರ್ಸ್ ಮನಸ್ಸಿಗೆ ಬಂದ ಸುದ್ದಿ ನೀಡೋದಕ್ಕೆ ತಡೆ ಬೀಳಲಿದೆ. ಸುಳ್ಳು ಸುದ್ದಿಗಳಿಗೆ ಬ್ರೇಕ್ ಬೀಳಲಿದೆ. ವಿಡಿಯೋ ನೋಡಿದ ತಕ್ಷಣ ಇದು ಅಸಲಿ ವಿಡಿಯೋನಾ ಇಲ್ಲ ನಕಲಿ ವಿಡಿಯೋನಾ ಎಂಬುದು ನೋಡುಗರಿಗೆ ತಿಳಿಯಲಿದೆ. ಕಂಟೆಂಟ್ ಕ್ರಿಯೇಟರ್ಸ್, ಎಐ ವಿಡಿಯೋ ರಚನೆಗೆ ಮುನ್ನ ಪರವಾನಗಿ ಪಡೆಯಬೇಕು. ಮತ್ತೆ ಪ್ರತಿಯೊಂದು ಎಐ ವಿಡಿಯೋಕೆ ಇದು ಎಐ ರಚಿತ ವಿಡಿಯೋ ಎನ್ನುವ ಲೇಬಲ್ ಹಾಗ್ಬೇಕಾಗುತ್ತದೆ. ಅಸಲಿ ವಿಡಿಯೋಕ್ಕೆ ಸಿಕ್ಕಷ್ಟು ಪ್ರಾಮುಖ್ಯತೆ, ವೀವ್ಸ್ ಎಐ ವಿಡಿಯೋಕ್ಕೆ ಸಿಗುವ ಸಾಧ್ಯತೆ ಕಡಿಮೆ.
