ಬಿಜೆಪಿಗೆ ಹೊಸ ತಲೆನೋವು? ಕೋವಿಡ್ ಕಾಲದ ಭ್ರಷ್ಟಾಚಾರದ 2ನೇ ಮಧ್ಯಾಂತರ ವರದಿ ಸಲ್ಲಿಕೆ

ಬೆಂಗಳೂರು: ಕೋವಿಡ್ ಸಂದರ್ಭವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗಾಗಿ ರಾಜ್ಯ ಸರಕಾರ ನೇಮಿಸಿದ್ದ ನ್ಯಾಯಮೂರ್ತಿ ಮೈಕಲ್ ಡಿ’ಕುನ್ಹಾ ಅಧ್ಯಕ್ಷತೆಯ ಆಯೋಗ ತನ್ನ ಎರಡನೇ ಮಧ್ಯಾಂತರ ವರದಿಯನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದು, ಈ ವರದಿಯ ಆಧಾರದ ಮೇಲೆ ಸರಕಾರ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗುವುದೇ ಎಂಬ ಪ್ರಶ್ನೆ ಉದ್ಭವವಾಗಿದೆ.

ನ್ಯಾ| ಡಿ’ಕುನ್ಹಾ ತಮ್ಮ ಮೊದಲ ಮಧ್ಯಾಂತರ ವರದಿ ಯನ್ನು ಸಲ್ಲಿಸಿ ತಿಂಗಳುಗಳೇ ಕಳೆದಿವೆ. ಸಂಪುಟದಲ್ಲಿ ಅದು ಒಪ್ಪಿಗೆಯಾಗಿದ್ದು, ಪರಿಶೀಲನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ಯನ್ನೂ ರಚನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಈಗ 1,808 ಪುಟಗಳನ್ನು ಒಳಗೊಂಡ 7 ಸಂಪುಟದ ಎರಡನೇ ಮಧ್ಯಾಂತರ ವರದಿ ಸಲ್ಲಿಕೆಯಾಗಿದೆ.
ಸರಕಾರದ ಮೂಲಗಳ ಪ್ರಕಾರ ಮುದ್ರಿತ ಬಾಕ್ಸ್‌ನಲ್ಲಿ ರುವ ಈ ವರದಿಯನ್ನು ಇನ್ನೂ ತೆರೆದಿಲ್ಲ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿದ್ದರಾಮಯ್ಯ ಇದನ್ನು ಹಸ್ತಾಂತರಿಸಿದ್ದು, ಸಂಪುಟ ಸಭೆಯಲ್ಲಿ ಮಂಡಿಸುವಂತೆ ಸೂಚನೆ ನೀಡಿದ್ದಾರೆ. ಮುಂದಿನ ವಾರ ನಡೆಯುವ ಸಂಪುಟ ಸಭೆಯಲ್ಲಿ ಇದು ಮಂಡನೆಯಾಗುತ್ತದೆಯೋ? ಇಲ್ಲವೋ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಮೊದಲ ಮಧ್ಯಾಂತರ ವರದಿ 1,500 ಪುಟಗಳನ್ನು ಒಳಗೊಂಡಿತ್ತು. ಕೋವಿಡ್ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯಸಚಿವರಾಗಿದ್ದಬಿ.ಶ್ರೀರಾಮುಲುಅವಧಿಯಲ್ಲಿ ಅಧಿಕಾರಿಗಳ ಶಿಫಾರಸುಗಳನ್ನು ಬದಿಗೊತ್ತಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರಿಂದ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ವರದಿಯಲ್ಲಿ ಶಿಫಾರಸು ಮಾಡಿದೆ ಎಂದು ಹೇಳಲಾಗಿತ್ತು.
ನ್ಯಾ| ಡಿ’ಕುನ್ಹಾಎರಡನೇ ಮಧ್ಯಾಂತರ ವರದಿ ಸಲ್ಲಿಸಿದರು.
1,808 ಪುಟಗಳನ್ನು ಒಳಗೊಂಡ 7 ಸಂಪುಟದ ವರದಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಹಗರಣಗಳ ಕುರಿತು 4 ಸಂಪುಟ
ಬೊಮ್ಮನಹಳ್ಳಿ ದಕ್ಷಿಣ ವಲಯ, ಪಶ್ಚಿಮ ವಲಯ, ಯಲಹಂಕ ವಲಯಗಳ ಹಗರಣದ ವಿವರಗಳು ಪ್ರತ್ಯೇಕ ಸಂಪುಟಗಳಲ್ಲಿ
ಉಳಿದ ಮೂರು ಸಂಪುಟಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಗ್ರಾಮಾಂತರ ಜಿಲ್ಲೆ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಕುರಿತ ವರದಿ
ಏನಿದು ಹಗರಣ?
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ವೇಳೆ ಕೋವಿಡ್ ಸಂದರ್ಭ ಪಿಪಿಇ ಕಿಟ್ ಸೇರಿದಂತೆ ಇತರ ಖರೀದಿಯಲ್ಲಿ 2,000 ಕೋಟಿ ರೂ.ಗಿಂತಲೂ ಅಧಿಕ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಗರದ ಬಗ್ಗೆ ವರದಿ ಸಲ್ಲಿಸಲು ಕಾಂಗ್ರೆಸ್ ಸರಕಾರ 2023ರ ಆಗಸ್ಟ್‌ನಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಮೈಕಲ್ ಡಿ’ಕುನ್ಹಾನೇತೃತ್ವದ ಆಯೋಗವನ್ನು ರಚನೆ ಮಾಡಿತ್ತು.