ಸ್ವಚ್ಛತೆಗೆ ಹೊಸ ಸೂತ್ರ: ಕೃಷ್ಣಾಪುರದಲ್ಲಿ ಕಸದ ವಿರುದ್ಧ ಸಿಸಿ ಟಿವಿ ಕಣ್ಗಾವಲು

ಕೃಷ್ಣಾಪುರ: ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಹೆಚ್ಚುತ್ತಿದ್ದು, ರಸ್ತೆ, ತೋಡು, ಚರಂಡಿ ಹೀಗೆ ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಎಸೆದ ತ್ಯಾಜ್ಯ ಕಟ್ಟುಗಳು, ತಂಪು ಪಾನೀಯದ ಬಾಟಲಿ, ಮಕ್ಕಳ ಪ್ಯಾಡ್ ಹೀಗೆ ಕಾಣ ಸಿಗುತ್ತಿವೆ. ಇದು ಸ್ವಚ್ಛತೆಗೆ ಧಕ್ಕೆ ತರುವ ಜತೆಗೆ ಮಳೆಗಾಲದಲ್ಲಿ ತೋಡು, ಚರಂಡಿ ಬ್ಲಾಕ್ ಆಗಲು ಕಾರಣವಾಗುತ್ತಿವೆ.
ಇದೀಗ ಇದನ್ನು ತಡೆಯಲು ಕೃಷ್ಣಾಪುರ ಲಂಡನ್ ಪಾರ್ಕ್ ಸುತ್ತಮುತ್ತ ಪರಿಸರ ಪ್ರಿಯ ಲಂಡನ್ ಪಾರ್ಕ್ ಫ್ರೆಂಡ್ಸ್ ತಂಡವೊಂದು ಗೆಳೆಯರು ಒಟ್ಟು ಸೇರಿ ಆರ್ಥಿಕ ವೆಚ್ಚ ಭರಿಸಿ ಸಿಸಿ ಟಿವಿ ಹಾಕಿದ್ದು, ಕಸ ಎಸೆಯುವವರನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಲು ಮುಂದಾಗಿದೆ.

ಇಲ್ಲಿನ ಪಾರ್ಕ್‌ಗೆ ನಿತ್ಯಾ ನೂರಾರು ಮಂದಿ ವಾಕಿಂಗ್, ಮಕ್ಕಳ ಪಾರ್ಕ್‌ನಲ್ಲಿ ಮಕ್ಕಳು ಆಡಲು ಬರುತ್ತಾರೆ. ಪಾರ್ಕ್ ಒಳಗೆ ಹಾಗೂ ಸುತ್ತಮುತ್ತ ಸ್ವಚ್ಚತೆ ಕಾಪಾಡಲು ಇಲ್ಲಿನ ಈ ಬಳಗ ಶ್ರಮಿಸುತ್ತಿದ್ದು, ಗಿಡ ಗಳಿಗೆ ನೀರು ಬಿಡುವುದು, ಕಸ ತೆಗೆದು ಸ್ವಚ್ಚಗೊಳಿಸುವುದು. ಸುತ್ತಮುತ್ತ ಸಸಿನೆಟ್ಟು ಪೋಷಿಸುವುದು ಹೀಗೆ ವಿವಿಧ ಆಯಾಮದಲ್ಲಿ ಶ್ರಮದಾನ ಮಾಡುತ್ತಾ ಬರುತ್ತಿದೆ.
ಎಸೆದವರಿಂದಲೇ ತೆಗೆಸಲು ಕ್ರಮ
ಇತ್ತೀಚೆಗೆ ರಾತೋ ರಾತ್ರಿ ಪಾರ್ಕ್ ಸುತ್ತ ಕಸ ಎಸೆಯುವವರನ್ನು ತಡೆಯಲು ಸಿಸಿ ಟಿವಿಯ ಕಣ್ಗಾವಲು ಅಳವಡಿಸಿದೆ. ಇದರಿಂದ ಕಸ ಹಾಕುವವರನ್ನು ಪತ್ತೆ ಹಚ್ಚಿ ವಾಗ್ಧಂಡನೆ ಹಾಕಲು ಹಾಗೂ ಎಚ್ಚರಿಸಿ ಅವರಿಂದಲೇ ಕಸ ತೆಗೆಸಲು ಮುಂದಾಗಿದೆ. ಇದೀಗ ಸಿಸಿ ಟಿವಿ ಹಾಕಿರುವುದರಿಂದ ಎಚ್ಚರಗೊಂಡ ಮಂದಿ ಕಸ ಹಾಕುವುದನ್ನು ಈ ಭಾಗದಲ್ಲಿ ಕಡಿಮೆ ಮಾಡಿದ್ದಾರೆ. ಪಾರ್ಕ್ ಇರಲಿ, ಮನೆಯ ಸುತ್ತಮುತ್ತ ಇರಲಿ ಸ್ವತ್ಛತೆ ಇಟ್ಟುಕೊಳ್ಳುವ ಮೂಲಕ ಜೀವ ಶೈಲಿಯನ್ನು ನಿತ್ಯ ಸ್ವಚ್ಛತೆಯೊಂದಿಗೆ ಆರಂಭಿಸಬೇಕು ಎನ್ನುವುದು ಈ ತಂಡದ ಧ್ಯೇಯವಾಗಿದೆ. ಲಂಡನ್ ಪಾರ್ಕ್ ಫ್ರೆಂಡ್ಸ್ ತಂಡದ ಈ ಕಾರ್ಯಶೈಲಿ ಇತರರಿಗೆ ಮಾದರಿಯಾಗಿದೆ.