Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಳ್ಳಾರಿಯ ಜೀನ್ಸ್‌ ಉದ್ಯಮಕ್ಕೆ ಹೊಸ ದಿಕ್ಕು: 500 ಕೋಟಿ ರೂ. ವೆಚ್ಚದಲ್ಲಿ ‘ಜೀನ್ಸ್‌ ಪಾರ್ಕ್‌’ ನಿರ್ಮಾಣ

Spread the love

ಬಳ್ಳಾರಿ ಎಂದ ತತ್‌ಕ್ಷಣ ನೆನಪಿಗೆ ಬರುವುದು ಗಣಿ ಧೂಳಿನ ಚಿತ್ರಣ. ಆದರೆ ಪ್ರತಿದಿನ ನಾವು ಧರಿಸುವ ಜೀನ್ಸ್‌ ಇದೇ ಗಣಿ ಧೂಳಿನ ನಾಡಿನಲ್ಲಿ ತಯಾರಾಗಿದ್ದು ಎಂಬುದು ಹುಬ್ಬೇರಿಸುವಂಥ ವಿಷಯವೇ. ಸವಲತ್ತುಗಳಿಲ್ಲದೆ ಸೊರಗಿರುವ ಜೀನ್ಸ್‌ ಉದ್ಯಮಕ್ಕೆ ಶುಕ್ರದೆಸೆ ಬಂದಿದೆ.

154 ಎಕ್ರೆ ವಿಶಾಲವಾದ ಪ್ರದೇಶದಲ್ಲಿ ಜೀನ್ಸ್‌ ಪಾರ್ಕ್‌ ನಿರ್ಮಾಣವಾಗುತ್ತಿದೆ. ಬಳ್ಳಾರಿ ಜೀನ್ಸ್‌ ಉದ್ಯಮದ ಒಳ ಹಾಗೂ ಹೊರ ನೋಟದ ಚಿತ್ರಣ ಇಲ್ಲಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ “ಬಳ್ಳಾರಿ ಜಿಲ್ಲೆ’ ಬ್ರಿಟಿಷರ ಆಡಳಿತದಲ್ಲಿತ್ತು. ಸೈನ್ಯವನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲು ಬಳ್ಳಾರಿ ನಗರದಲ್ಲಿ “ಕಂಟೋನ್ಮೆಂಟ್‌’ (ದಂಡು ಪ್ರದೇಶ) ಸ್ಥಾಪಿಸಿಕೊಂಡಿದ್ದ ಬ್ರಿಟಿಷರು, ಮೊದಲ ಹಾಗೂ ಎರಡನೇ ವಿಶ್ವ ಯುದ್ಧದ ವೇಳೆ ತಮ್ಮ ಸೈನಿಕರಿಗೆ ಜೀನ್ಸ್‌ ಬಟ್ಟೆಯಿಂದ “ಸಮವಸ್ತ್ರ’ ಉತ್ಪಾದಿಸುವ (ಹೊಲಿಯುವ) ಮೂಲಕ ಬಳ್ಳಾರಿಯಲ್ಲಿ ಜೀನ್ಸ್‌ ಉದ್ಯಮ ಆರಂಭವಾಯಿತು.

ಆಗ ಬಳ್ಳಾರಿಯಲ್ಲಿ ಜೀನ್ಸ್‌ ಉತ್ಪನ್ನ ಸಿದ್ಧಪಡಿಸುವ ಟೈಲರ್‌ಗಳಾರೂ ಇಲ್ಲದ ಕಾರಣ ಬ್ರಿಟಿಷರು ಮಹಾರಾಷ್ಟ್ರದಿಂದ ಹಲವಾರು ದರ್ಜಿ ಸಮುದಾಯದ ಟೈಲರ್‌ಗಳನ್ನು ಬಳ್ಳಾರಿಗೆ ಕರೆತಂದು ಸೈನಿಕರಿಗೆ ಜೀನ್ಸ್‌ ಉತ್ಪನ್ನಗಳ ಸಮವಸ್ತ್ರಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ ಸ್ವಾತಂತ್ರ್ಯದ ಬಳಿಕ ದರ್ಜಿ ಸಮುದಾಯಗಳು ಶಾಲಾ ಸಮವಸ್ತ್ರಗಳನ್ನು ತಯಾರಿಸುವ ಮೂಲಕ “ಜೀನ್ಸ್‌’ ಉತ್ಪನ್ನಗಳ ಉತ್ಪಾದನೆ ಸ್ಥಿರವಾಗುವುದರ ಜತೆಗೆ ಬದಲಾದ ಕಾಲದಲ್ಲಿ ಬೃಹತ್‌ ಜೀನ್ಸ್‌ ಉದ್ಯಮವಾಗಿ ಬೆಳೆದು, ದಕ್ಷಿಣ ಭಾರತದಾದ್ಯಂತ ಜನಪ್ರಿಯತೆ ಗಳಿಸಿದೆ.

ಬಳ್ಳಾರಿ ಮನೆ ಮನೆಗಳಲ್ಲೂ ಜೀನ್ಸ್‌ ತಯಾರಿ!
ಬಳ್ಳಾರಿ ನಗರದ ಕೌಲ್‌ಬಜಾರ್‌, ಮಿಲ್ಲರ್‌ಪೇಟೆ ಸೇರಿ ಬಳ್ಳಾರಿ ನಗರದ ಓಲ್ಡ್‌ ಸಿಟಿಯಲ್ಲಿ ಮನೆ ಮನೆಗಳಲ್ಲೂ “ಜೀನ್ಸ್‌’ ಉಡುಪು (ಪ್ಯಾಂಟ್‌)ಗಳನ್ನು ಹೊಲಿಯುವ ಉದ್ಯಮ ನಡೆಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ತೊಡಗಿಸಿಕೊಂಡಿದ್ದು ಬದುಕು ಕಂಡುಕೊಂಡಿದ್ದಾರೆ. ಜೀನ್ಸ್‌ ಪ್ಯಾಂಟ್‌ ಹೊಲಿಯುವ, ಬಟನ್‌ ಹಾಕುವ, ದಾರ ತೆಗೆಯುವ, ವಾಷಿಂಗ್‌ ಮಾಡುವ (ಬಣ್ಣ ಹಾಕುವ), ಐರನ್‌ ಮಾಡುವ (ಇಸ್ತ್ರಿ), ಲೇಬಲ್‌ ಹಾಕಿ ಪ್ಯಾಕಿಂಗ್‌ ಮಾಡುವ ಹೀಗೆ ಹಲವಾರು ವಿಭಾಗಗಳಲ್ಲಿ ಜೀನ್ಸ್‌ ಕೆಲಸಗಳು ನಡೆಯುತ್ತಿವೆ.

ಶ್ರೀಲಂಕಾ, ಬಾಂಗ್ಲಾದೇಶಕ್ಕೂ ರಫ್ತು
ಬಳ್ಳಾರಿಯಲ್ಲಿ ಉತ್ಪಾದನೆಯಾಗುವ ಜೀನ್ಸ್‌ ಉತ್ಪನ್ನಗಳು ದಕ್ಷಿಣ ಭಾರತದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಮಾರುಕಟ್ಟೆ ಹೊಂದಿವೆ. ಜತೆಗೆ ತಮಿಳುನಾಡಿನ ಉದ್ಯಮಿಗಳು ಪಕ್ಕದ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶಗಳಿಗೂ ರಫ್ತು ಮಾಡುವ ಮೂಲಕ ವಿದೇಶದಲ್ಲೂ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಸದ್ಯ ಬಳ್ಳಾರಿಯಲ್ಲಿ ಪ್ರತೀ ದಿನ 1 ಲಕ್ಷ ಜೀನ್ಸ್‌ ಉತ್ಪಾದನೆಯಾಗುತ್ತವೆ.

ಜೀನ್ಸ್‌ನಿಂದ 2 ಲಕ್ಷ ಜನರಿಗೆ ಉದ್ಯೋಗ
ತುಂಗಭದ್ರಾ ಜಲಾಶಯದಷ್ಟೇ ಹಿನ್ನೆಲೆಯುಳ್ಳ, ಜಿಂದಾಲ್‌ ಸಂಸ್ಥೆಗಿಂತಲೂ ಮೊದಲು ಜಿಲ್ಲೆಯ ಜನರಿಗೆ ಉದ್ಯೋಗ ಕಲ್ಪಿಸಿದ್ದು ಇದೇ “ಜೀನ್ಸ್‌’ ಉದ್ಯಮ. ಬಳ್ಳಾರಿಯಲ್ಲಿ ನೂರಾರು ಯಂತ್ರಗಳುಳ್ಳ ನಾಲ್ಕೈದು ಘಟಕಗಳು, ಮನೆಗ ಳಲ್ಲಿರುವ ಸಣ್ಣ ಸಣ್ಣ ಘಟಕಗಳು ಸೇರಿ 500ಕ್ಕೂ ಹೆಚ್ಚು ಜೀನ್ಸ್‌ ಘಟಕಗಳು ಇವೆ. ಜೀನ್ಸ್‌ ಕಾರ್ಮಿಕರು ಪ್ರತಿದಿನ ಸರಾಸರಿ 500 ರೂ.ವರೆಗೂ ಸಂಬಳ ನೀಡಲಾಗುತ್ತದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಜೀನ್ಸ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್‌ ಸಂಸ್ಥೆ ಬಳಿಕ ಅತಿಹೆಚ್ಚು ಜನರಿಗೆ ಜೀನ್ಸ್‌ ಉದ್ಯಮ ಉದ್ಯೋಗ ಸೃಷ್ಟಿಸಿದೆ ಎಂದು ಜೀನ್ಸ್‌ ಉದ್ಯಮಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.

500 ಕೋಟಿ ರೂ. ವೆಚ್ಚದಲ್ಲಿ 154 ಎಕ್ರೆಯಲ್ಲಿ ಜೀನ್ಸ್‌ ಪಾರ್ಕ್‌
ಭಾರತ್‌ ಜೋಡೋ ಯಾತ್ರೆ ವೇಳೆ 2022ರಲ್ಲಿ ಬಳ್ಳಾರಿಗೆ ಭೇಟಿ ನೀಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಜೀನ್ಸ್‌ ಅಪ್ಪೆರಲ್‌ ಪಾರ್ಕ್‌ ಸ್ಥಾಪಿಸುವ ಘೋಷಣೆ ಮಾಡಿದ್ದರು. ಅದರಂತೆ ಬಳ್ಳಾರಿ ಜೀನ್ಸ್‌ಗೆ ಬ್ರ್ಯಾಂಡಿಂಗ್‌ ಮಾಡುವ ನಿಟ್ಟಿನಲ್ಲಿ ಬಳ್ಳಾರಿ ನಗರಕ್ಕೆ ಹೊಂದಿಕೊಂಡಿರುವ ಮಿಂಚೇರಿ-ಸಂಜೀವರಾಯನ ಕೋಟೆ ಬಳಿ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ “ಜೀನ್ಸ್‌ ಪಾರ್ಕ್‌’ ಸ್ಥಾಪಿಸಲು ಪ್ರತೀ ಎಕ್ರೆಗೆ 40 ಲಕ್ಷ ರೂ.ನಂತೆ 154 ಎಕ್ರೆ ಪ್ರದೇಶ ಖರೀದಿಸಿದೆ. ಅದಕ್ಕೆ ಪೂರಕವಾಗಿ ರಸ್ತೆ, ಒಳಚರಂಡಿ, ಆಸ್ಪತ್ರೆ, ಬ್ಯಾಂಕ್‌ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಉದ್ಯಮ ಆರಂಭಿಸಲು 50ಕ್ಕೂ ಹೆಚ್ಚು ಜೀನ್ಸ್‌ ಉದ್ಯಮಿಗಳಿಂದ ಮಂಡಳಿಗೆ ಅರ್ಜಿಗಳು ಬಂದಿವೆ. 500 ಕೋಟಿ.ರೂ. ವೆಚ್ಚದಲ್ಲಿ ಈ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ.

ಜೀನ್ಸ್‌ ಪಾರ್ಕ್‌ನಲ್ಲಿ ಏನೇನಿರುತ್ತದೆ?
ಸ್ಟಿಚ್ಚಿಂಗ್‌, ವಾಷಿಂಗ್‌ ಮತ್ತು ಮಾರಾಟ ಸೇರಿದಂತೆ ಹಲವು ಸವಲತ್ತುಗಳನ್ನು ಒಂದೇ ಸೂರಿನಡಿ ದೊರೆಯಲಿವೆ. ಜೀನ್ಸ್‌ ಉದ್ಯಮಿಗಳಿಗೆ ಕಲುಷಿತ ಹಾಗೂ ಸಾಮಾನ್ಯ ನೀರಿನ ಸಂಸ್ಕರಣೆಯೇ ದೊಡ್ಡ ಸವಾಲು. ಹೀಗಾಗಿ ಕೆಐಎಡಿಬಿಯಿಂದಲೇ ನೀರು ಸಂಸ್ಕರಣ ಘಟಕ ನಿರ್ಮಿಸಲಾಗುತ್ತಿದೆ. ಉದ್ಯಮಿಗಳು ಪ್ರತ್ಯೇಕ ಸಂಸ್ಕರಣ ಘಟಕ ಸ್ಥಾಪಿಸಿಕೊಳ್ಳುವ ಅಗತ್ಯ ಇಲ್ಲ. ಸದ್ಯ ಬಳ್ಳಾರಿ ಜಿಲ್ಲೆಯಲ್ಲಿರುವ ಜೀನ್ಸ್‌ ಡೈಯಿಂಗ್‌ ಘಟಕಗಳು ಪ್ರತ್ಯೇಕ ಕಲುಷಿತ ನೀರು ಸಂಸ್ಕರಣ ಘಟಕ ಮತ್ತು ಸಾಮಾನ್ಯ ಸಂಸ್ಕರಣ ಘಟಕ ಮಾಡಿಕೊಳ್ಳದೇ ಇರುವುದರಿಂದಾಗಿ ಕಲುಷಿತ ನೀರನ್ನು ಪರಿಸರಕ್ಕೆ ಬಿಡಲಾಗುತ್ತಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಮಾಲಿನ್ಯ ಹೆಚ್ಚಿದೆ. ಪರಿಸರ ಮಾಲಿನ್ಯ ತಪ್ಪಿಸಲೆಂದೇ ಕೆಐಎಡಿಬಿಯಿಂದ ಸಂಸ್ಕರಣ ಘಟಕ ನಿರ್ಮಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ, ಅನಾರೋಗ್ಯಕರ ಬೆಲೆ ಪೈಪೋಟಿ ತಪ್ಪಿಸುವ ಪ್ರಸ್ತಾವನೆಗಳು ಯೋಜನೆಯಲ್ಲಿವೆ. ಇನ್ನೊಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಜೀನ್ಸ್‌ ಪಾರ್ಕ್‌ನಿಂದ ಲಾಭ ಏನು?
ಜೀನ್ಸ್‌ ಅಪರೇಲ್‌ ಪಾರ್ಕ್‌ ಮಾಡುವುದರಿಂದ ದೊಡ್ಡ ದೊಡ್ಡ ಕಂಪೆ‌ನಿಗಳು ಬರುತ್ತವೆ. ಇದರಿಂದ ಬಳ್ಳಾರಿಯಲ್ಲಿ ಪ್ರತೀ ದಿನ ಇರುವ 1 ಲಕ್ಷ ಜೀನ್ಸ್‌ ಪ್ಯಾಂಟ್‌ ಉತ್ಪಾದನೆ ಸಾಮರ್ಥ್ಯ ಐದಾರು ಲಕ್ಷಗಳಿಗೆ ಹೆಚ್ಚಳವಾಗಲಿದೆ. ಇದರಿಂದ ಇನ್ನಷ್ಟು ಜನರಿಗೆ ಉದ್ಯೋಗ ಸಿಗಲಿದೆ. ಜೀನ್ಸ್‌ ಉದ್ಯಮ ಅವಲಂಬಿಸಿರುವ ವಾಷಿಂಗ್‌, ಬಟನ್‌, ಪ್ಯಾಕಿಂಗ್‌, ಸ್ಟೀಮ್‌ ಐರನ್‌ (ಇಸ್ತ್ರಿ) ಯುನಿಟ್‌ಗಳ ಸಂಖ್ಯೆ ಹೆಚ್ಚಲಿದೆ. ಎಲ್ಲದಕ್ಕೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಮಾತ್ರ ಖ್ಯಾತಿಯಾಗಿರುವ ಬಳ್ಳಾರಿ ಜೀನ್ಸ್‌ ಉತ್ಪನ್ನಗಳನ್ನು ದೊಡ್ಡ ದೊಡ್ಡ ಕಂಪೆನಿಗಳಿಂದ ವಿದೇಶಕ್ಕೂ ರಫ್ತು ಮಾಡಬಹುದು. ಇದರಿಂದ ಉತ್ಪನ್ನಗಳ ಮೌಲ್ಯ, ಕಾರ್ಮಿಕರ ವೇತನ ಜಾಸ್ತಿಯಾಗಲಿದೆ. ಜತೆಗೆ ವರ್ಷಕ್ಕೆ 1500-2000 ಕೋ.ರೂ.ಗಳಿರುವ ವಹಿವಾಟು ದೊಡ್ಡ ದೊಡ್ಡ ಕಂಪೆನಿಗಳಿಂದ 3-4 ಸಾವಿರ ಕೋಟಿಗಳಿಗೂ ತಲುಪುವ ಸಾಧ್ಯತೆಯಿದೆ ಎಂಬುದು ಜೀನ್ಸ್‌ ಉದ್ಯಮಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *