ನೇಪಾಳ: ತ್ರಿಶೂಲಿ ನದಿಗೆ ಉರುಳಿದ ಬಸ್; 18 ಮಂದಿ ಸಾ*ವು, 27 ಜನರಿಗೆ ಗಾಯ

ಕಠ್ಮಂಡು: ಪ್ರಯಾಣಿಕರಿದ್ದ ಬಸ್ ನದಿಗೆ ಉರುಳಿ ಬಿದ್ದ ಪರಿಣಾಮ 18 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿರುವ ಘಟನೆ ನೇಪಾಳದ (Nepal) ಧಾಡಿಂಗ್ (Dhading) ಜಿಲ್ಲೆಯಲ್ಲಿ ನಡೆದಿದೆ.

ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 90 ಕಿ.ಮೀ ದೂರದಲ್ಲಿರುವ ಗಜೂರಿ ಬಳಿ ಸೋಮವಾರ ನಸುಕಿನ ಜಾವ 1:30ರ ಸುಮಾರಿಗೆ ದುರಂತ ಸಂಭವಿಸಿದೆ. ಬಸ್ ಪೋಖರದಿಂದ ಕಠ್ಮಂಡು ಕಡೆಗೆ ಬರುತ್ತಿದ್ದ ವೇಳೆ ತ್ರಿಶೂಲಿ ನದಿಗೆ (Trishuli River) ಉರುಳಿದೆ. ತಕ್ಷಣವೇ ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಹಾಗೂ ನೇಪಾಳ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ
ಗಾಯಾಳುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಪೈಕಿ ಒಬ್ಬರು ನ್ಯೂಜಿಲೆಂಡ್ ಪ್ರಜೆಯಾಗಿದ್ದರು. ಜಪಾನ್ ಹಾಗೂ ನೆದರ್ಲೆಂಡ್ನ ತಲಾ ಒಬ್ಬರು ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆಯ ವಕ್ತಾರ ಬಿಷ್ಣು ಪ್ರಸಾದ್ ಭಟ್ಟ ತಿಳಿಸಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಬಸ್ ಚಾಲಕನ ಅತಿವೇಗದ ಚಾಲನೆಯಿಂದ ಬಸ್ ನದಿಗೆ ಉರುಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.