ಕನಸಿನಲ್ಲಿ ತಾಯಿ ಕರೆದಳು ಎಂದು ಡೆತ್ ನೋಟ್ ಬರೆದಿಟ್ಟು ನೀಟ್ ಆಕಾಂಕ್ಷಿ ಆತ್ಮಹತ್ಯೆ!

ಕನಸಿನಲ್ಲಿ ನನ್ನ ತಾಯಿ ಬಾ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವೆ’ ಎಂದು ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಶುಕ್ರವಾರ (ಜು. 25) ನಡೆದಿದೆ.

ಶಿವಶರಣ್ ಭೂತಾಲಿ ತಲ್ಕೋಟಿ(16)ಮೃತ ಬಾಲಕ.
ಮಾವನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕನ ತಾಯಿ 3 ತಿಂಗಳ ಹಿಂದೆ ಕಾಮಾಲೆ ರೋಗದಿಂದ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸೋಲಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕ ಶಿವಶರಣ್ ಬರೆದ ಡೆತ್ ನೋಟ್ ಅಧಿಕಾರಿಗಳಿಗೆ ಸಿಕ್ಕಿದ್ದು, ನೋಟ್ನಲ್ಲಿ ನನ್ನ ತಾಯಿ ತನ್ನಲ್ಲಿಗೆ ಬರಲು ಕೇಳಿಕೊಂಡಳು ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಎಂದು ಬರೆದಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ಡೆತ್ ನೋಟ್
‘ನಾನು ನಿಮ್ಮ ಶಿವಶರಣ್. ಬದುಕಲು ಇಷ್ಟವಿಲ್ಲದ ಕಾರಣ ನಾನು ಸಾಯುತ್ತಿದ್ದೇನೆ. ನನ್ನ ತಾಯಿ ಹೋದಾಗ ನಾನು ಹೋಗಬೇಕಿತ್ತು, ಆದರೆ, ನಾನು ನನ್ನ ಚಿಕ್ಕಪ್ಪ ಮತ್ತು ಅಜ್ಜಿಯ ಮುಖಗಳನ್ನು ನೋಡುತ್ತಾ ಜೀವಂತವಾಗಿದ್ದೆ. ನನ್ನ ಸಾವಿಗೆ ಕಾರಣ ನಿನ್ನೆ ನನ್ನ ಅಮ್ಮ ಕನಸಿನಲ್ಲಿ ಬಂದಿದ್ದರು. ಯಾಕೆ ಅಸಮಾಧಾನದಿಂದ ಇದ್ದೀಯಾ ಎಂದು ಕೇಳಿ, ನನ್ನಲ್ಲಿಗೆ ಬಾ ಎಂದು ಹೇಳಿದರು. ಹಾಗಾಗಿ, ನಾನು ಸಾಯುವ ಬಗ್ಗೆ ಯೋಚಿಸಿದೆ. ಚಿಕ್ಕಪ್ಪ ಮತ್ತು ಅಜ್ಜಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ, ಯಾಕಂದರೆ ನನ್ನನ್ನು ನೀವು ತುಂಬಾ ಬೆಂಬಲಿಸಿ, ಮುದ್ದೀಸಿದ್ದೀರಿ’
‘ನಾನು ಸಾಯುತ್ತಿದ್ದೇನೆ. ನಾನು ಹೋದ ನಂತರ, ನನ್ನ ತಂಗಿಯನ್ನು ಸಂತೋಷವಾಗಿಡಿ. ಚಿಕ್ಕಪ್ಪ, ನಾನು ನಿಮಗೆ ಒಂದು ವಿಷಯ ಹೇಳಬೇಕು. ಅಜ್ಜಿಯನ್ನು ಅಪ್ಪನ ಬಳಿಗೆ ಕಳುಹಿಸಬೇಡಿ. ಎಲ್ಲರೂ, ನಿಮ್ಮ ಬಗ್ಗೆ ಕಾಳಜಿ ವಹಿಸಿ. ನೀವು ನನ್ನ ಹೆತ್ತವರಿಗಿಂತ ಹೆಚ್ಚಿನದನ್ನು ನನಗಾಗಿ ಮಾಡಿದ್ದೀರಿ, ನನ್ನ ಸಾವಿಗೆ ನಾನು ಮಾತ್ರ ಜವಾಬ್ದಾರ ಇಂತಿ ನಿಮ್ಮ ಪಿಂಟ್ಯಾ ಎಂದು ನೋಟ್ನಲ್ಲಿ ಬಾಲಕ ಬರೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಪಿಂಟ್ಯಾ’ ಅನ್ನುವುದು ಮೃತ ಬಾಲಕನನ್ನ ಕುಟುಂಬಸ್ಥರು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಎನ್ನಲಾಗಿದೆ. ಇನ್ನು SSLC ಪರೀಕ್ಷೆಯಲ್ಲಿ 92% ಅಂಕ ಪಡೆದಿದ್ದ ಮೃತ ಶಿವಶರಣ್ ವೈದ್ಯನಾಗಲು ಬಯಸಿದ್ದ, ನೀಟ್ ಪರೀಕ್ಷೆಗೆ ತಯಾರಿ ನಡೆಸ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
