ಬಿಜಾಪುರದಲ್ಲಿ ನಕ್ಸಲರ ಅಟ್ಟಹಾಸ – 13 ವರ್ಷದ ಬಾಲಕನೂ ಬ*ಲಿ

ರಾಯ್ಪುರ:ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲರ ಅಟ್ಟಹಾಸ ಮಿತಿಮೀರುತ್ತಿದೆ. ಜಿಲ್ಲೆಯಲ್ಲಿ ನಕ್ಸಲರು ಬಾಲಕ ಸೇರಿದಂತೆ ಮೂವರು ಗ್ರಾಮಸ್ಥರನ್ನು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

ಪಮೇದ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂದ್ರಾಬೋರ್ ಮತ್ತು ಏಂಪುರ ಗ್ರಾಮಗಳಲ್ಲಿ ಅಮಾಯಕ ಗ್ರಾಮಸ್ಥರನ್ನು ನಕ್ಸಲರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಕಾರಣ ಮತ್ತು ಅಪರಾಧ ಯಾವಾಗ ನಡೆದಿದೆ ಎಂಬ ಬಗ್ಗೆ ತಿಳಿಯಲು ತನಿಖೆ ನಡೆಸಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಛತ್ತೀಸ್‌ಗಢಕ್ಕೆ ಭೇಟಿ ನೀಡುವ ಮುನ್ನ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಕ್ಸಲ್ ಚಟುವಟಿಕೆಗಳು ತಗ್ಗಿದೆ ಎಂದು ಅಮಿತ್ ಶಾ ಪದೇ ಪದೇ ಹೇಳುತ್ತಿದ್ದರು. ಅವರಿಗೆ ತಿರುಗೇಟು ನೀಡುವ ಸಲುವಾಗಿಯೇ ಈ ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ.
13 ವರ್ಷದ ಬಾಲಕ ಸೇರಿದಂತೆ ಮೂವರು ಗ್ರಾಮಸ್ಥರನ್ನು ನಕ್ಸಲರು ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಾರೆ ಎನ್ನಲಾಗಿದೆ. ಮೃತ ಮೂವರಲ್ಲಿ ಇಬ್ಬರು ಹಿರಿಯ ಮಾವೋವಾದಿ ಕೇಡರ್ ದಿನೇಶ್ ಮೋದಿಯಂ ಅವರ ಸಂಬಂಧಿಕರಾಗಿದ್ದು, ಈ ವರ್ಷದ ಮಾರ್ಚ್ ನಲ್ಲಿ ಅವರು ಪೊಲೀಸರ ಮುಂದೆ ಶರಣಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
