ನೌಮನ್ ಅಲಿ ಸ್ಪಿನ್ ಮೋಡಿ: ಲಾಹೋರ್ ಟೆಸ್ಟ್‌ನಲ್ಲಿ ಒಟ್ಟು 10 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಪಿನ್ನರ್

PAK vs SA: ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ 93 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ನೌಮನ್ ಅಲಿ 10 ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠರಾದರು. ಈ ಗೆಲುವಿನಿಂದ ಪಾಕಿಸ್ತಾನ WTC ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿ, ಶ್ರೀಲಂಕಾ ಮತ್ತು ಭಾರತವನ್ನು ಹಿಂದಿಕ್ಕಿದೆ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಪಾಕ್ ತಂಡ, ತನ್ನ ಮೊದಲ WTC ಗೆಲುವು ದಾಖಲಿಸಿದೆ.
PAK vs SA: ಆಫ್ರಿಕಾವನ್ನು ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿದ ಪಾಕಿಸ್ತಾನ
ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ (Pakistan vs South Africa) ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಆತಿಥೇಯ ಪಾಕಿಸ್ತಾನ 93 ರನ್‌ಗಳಿಂದ ಗೆದ್ದುಕೊಂಡಿದೆ. ಲಾಹೋರ್‌ನಲ್ಲಿ ನಡೆದ ಈ ಟೆಸ್ಟ್ ಪಂದ್ಯವನ್ನು ನಾಲ್ಕು ದಿನಗಳಲ್ಲಿ ಗೆದ್ದುಕೊಳ್ಳುವ ಮೂಲಕ ಪಾಕಿಸ್ತಾನ ತನ್ನ ತವರು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಾಕಿಸ್ತಾನ ನೀಡಿದ 277 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 183 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಡಬ್ಲ್ಯೂಟಿಸಿ ಪಾಯಿಂಟ್ (WTC Points Table) ಪಟ್ಟಿಯಲ್ಲಿ ಬಂಪರ್ ಲಾಭ ಪಡೆದಿರುವ ಪಾಕಿಸ್ತಾನ, ಶ್ರೀಲಂಕಾ ಮತ್ತು ಭಾರತವನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 2025-27ರಲ್ಲಿ ಡಬ್ಲ್ಯೂಟಿಸಿಯಲ್ಲಿ ಪಾಕಿಸ್ತಾನದ ಮೊದಲ ಟೆಸ್ಟ್ ಗೆಲುವು ಇದಾಗಿದ್ದು, ಇದುವರೆಗೆ ಆಡಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಜಯದ ನಗೆ ಬೀರಿದೆ. ಪಾಕಿಸ್ತಾನದ ಈ ಗೆಲುವಿನಿಂದ ಭಾರತ 4ನೇ ಸ್ಥಾನಕ್ಕೆ ಜಾರಿದೆ.

10 ವಿಕೆಟ್ ಕಬಳಿಸಿದ ನೌಮನ್ ಅಲಿ
ಪಾಕಿಸ್ತಾನದ ಸ್ಪಿನ್ನರ್ ನೌಮನ್ ಅಲಿ ಲಾಹೋರ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದಿದ್ದ ಅಲಿ, ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಸೇರಿದಂತೆ ಒಟ್ಟು ಎರಡೂ ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದರು. ನೌಮನ್ ಅಲಿ ಒಂದೇ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಕಬಳಿಸಿರುವುದು ಇದು ಅವರ ಟೆಸ್ಟ್ ವೃತ್ತಿಜೀವನದಲ್ಲಿ ಮೂರನೇ ಬಾರಿ. ಈ ಅತ್ಯುತ್ತಮ ಪ್ರದರ್ಶನಕ್ಕಾಗಿ, ನೌಮನ್ ಅಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತು.
4 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಿದ ಅಫ್ರಿದಿ
ನೌಮನ್ ಅಲಿ ಜೊತೆಗೆ, ಶಾಹೀನ್ ಶಾ ಅಫ್ರಿದಿ ಕೂಡ ದಕ್ಷಿಣ ಆಫ್ರಿಕಾ ಗುರಿ ತಲುಪದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 8.5 ಓವರ್‌ಗಳಲ್ಲಿ 33 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು, ಇದು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳಾಗಿದೆ. ಇದಕ್ಕೂ ಮೊದಲು, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶ 43 ರನ್‌ಗಳಿಗೆ 4 ವಿಕೆಟ್‌ಗಳಾಗಿತ್ತು.
IND vs WI: ಜಡೇಜಾ ಸ್ಪಿನ್ ಜಾದೂ.. ಎರಡನೇ ಟೆಸ್ಟ್ನಲ್ಲೂ ಮುಗ್ಗರಿಸಿದ ವೆಸ್ಟ್ ಇಂಡೀಸ್
ಪಂದ್ಯ ಹೀಗಿತ್ತು
ದಕ್ಷಿಣ ಆಫ್ರಿಕಾ ಹಾಲಿ ಡಬ್ಲ್ಯೂಟಿಸಿ ಚಾಂಪಿಯನ್ ಆಗಿದ್ದರಿಂದ ಲಾಹೋರ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವು ಗಮನಾರ್ಹವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 378 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 169 ರನ್ ಗಳಿಸಿ ದಕ್ಷಿಣ ಆಫ್ರಿಕಾಕ್ಕೆ ಒಟ್ಟು 277 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 93 ರನ್‌ಗಳಿಂದ ಟೆಸ್ಟ್ ಸೋತು ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ.