ಸಂಸ್ಕರಿಸಿದ ನೀರಿನ ಗುಣಮಟ್ಟಕ್ಕೆ ರಾಷ್ಟ್ರಮಟ್ಟದಲ್ಲಿ ಏಕೀಕೃತ ಮಾನದಂಡ: ನೀತಿ ಆಯೋಗದಿಂದ ಹೊಸ ನೀತಿ ರೂಪಿಸಲು ಚಿಂತನೆ

ಬೆಂಗಳೂರು: ಸಂಸ್ಕರಿಸಿದ ನೀರಿನ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಖಚಿತಪಡಿಸಲು ಏಕೀಕೃತ ರಾಷ್ಟ್ರೀಯ ಮಾನದಂಡದ ಅವಶ್ಯಕತೆಯಿದ್ದು, ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ಏಕೀಕೃತ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ನೀತಿ ಆಯೋಗದ (NITI Aayog) ಸದಸ್ಯ ಡಾ. ವಿನೋದ್ ಕೆ.ಪಾಲ್ (Dr. Vinod K. Paul) ಹೇಳಿದರು.

ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದಲ್ಲಿ ನೀತಿ ಆಯೋಗ ಆಯೋಜಿಸಿದ್ದ `ಭಾರತದಲ್ಲಿ ಸಂಸ್ಕರಿಸಿದ ನೀರಿನ ಪುನರ್ ಬಳಕೆ’ ಕುರಿತು ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಮಾತನಾಡಿದರು.
ಭಾರತದ ತಲಾ ನೀರಿನ ಲಭ್ಯತೆ ಈಗಾಗಲೇ 1,400 ಘನ ಮೀಟರ್‌ಗಳಿಗಿಂತ ಕಡಿಮೆಯಾಗಿದೆ. 2030ರೊಳಗೆ ಶೇ.50 ಪುನರ್‌ಬಳಕೆ ಮತ್ತು 2045ರೊಳಗೆ ಶೇ.100 ಪುನರ್‌ಬಳಕೆಯನ್ನು ಮಾಡುವ ನಿಟ್ಟಿನಲ್ಲಿ ದೇಶವು ನಿರ್ಣಾಯಕ ಹೆಜ್ಜೆ ಇಡಬೇಕು. ಪ್ರಸ್ತುತ ಕೇವಲ 11 ರಾಜ್ಯಗಳಿಗೆ ಮಾತ್ರ ಸಂಸ್ಕರಿಸಿದ ನೀರಿನ ಪುನರ್‌ಬಳಕೆ ನೀತಿ ಇದೆ ಎಂದರು.
ನೀರು ಜೀವನದ ಒಂದು ಭಾಗವಷ್ಟೇ ಅಲ್ಲ. ನೀರಿದ್ದರೆ ಮಾತ್ರವೇ ಜೀವನ ಎಂಬುದನ್ನು ಅರಿತುಕೊಳ್ಳಬೇಕಿದೆ. ನೀರು ಒಂದು ಸಂಪನ್ಮೂಲ ಕೂಡ ಹೌದು. ಸಂಸ್ಕರಿಸಿದ ನೀರಿನ ಬಳಕೆ ಬಗ್ಗೆ ಇರುವ ಮೂಢನಂಬಿಕೆಯನ್ನು ನಾವು ಬಿಡಬೇಕು. ಅಂತರ್‌ಜಲ ಮಟ್ಟ ಕುಸಿಯುತ್ತಿದೆ. ನದಿಗಳಲ್ಲೂ ನೀರಿನ ಹರಿವು ಕಡಿಮೆಯಾಗುತ್ತಿದೆ. ಗಂಗಾ ನದಿಯನ್ನು ಪುನಶ್ಚೇತನ ನಡೆಸುವ ಕಾರ್ಯ ಪ್ರಗತಿಯಲ್ಲಿದೆ. 2045ರ ವೇಳೆಗೆ ಶೇ.100ರಷ್ಟು ಮುಗಿಯಲಿದೆ. ಕೃಷಿ ಕೆಲಸಕ್ಕೆ ಸಂಸ್ಕರಿಸಿದ ನೀರಿನ ಬಳಕೆ ಮಾಡುವುದಕ್ಕೆ ಉತ್ತೇಜನ ನೀಡಬೇಕು. ಇದೇ ವೇಳೆ ಶುದ್ಧೀಕರಿಸಿದ, ಸಂಸ್ಕರಿಸಿದ ನೀರಿನ ಬಳಕೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಾನದಂಡ ರೂಪಿಸುವ ಅವಶ್ಯಕತೆಯಿದೆ. ಈ ಬಗ್ಗೆ ಈಗಾಗಲೇ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, 2024ನೇ ಸಾಲಿನಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಭದ್ರತೆಯನ್ನು ಕಾಯ್ದುಕೊಳ್ಳಲು ಸಂಸ್ಕರಿಸಿದ ನೀರಿನ್ನು ಕುಡಿಯುವುದಕ್ಕೆ ಹೊರತಾಗಿ ಇತರೆ ಕಾರ್ಯಾಕ್ಕೆ ಬಳಕೆ ಮಾಡಲು ಸೂಚಿಸಲಾಗಿತ್ತು. ನಗರದ 110 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಯಿತು. 2028ರೊಳಗೆ ಶೇ.100ರಷ್ಟು ಸಂಸ್ಕರಿಸಿದ ಬಳಕೆ ಮತ್ತು ಮಳೆನೀರು ಸಂಗ್ರಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಅಲ್ಲದೆ, ಸಂಸ್ಕರಿಸಿದ ನೀರಿನ ಪುನರ್‌ಬಳಕೆ ಸಂಬಂಧಿತ ನಿಯಮಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರು ಪ್ರತಿದಿನ 2,225 ಎಂಎಲ್‌ಡಿ ನೀರನ್ನು ಪೂರೈಸುತ್ತಿದೆ ಮತ್ತು ಜೊತೆಗೆ ಪ್ರತಿ ನಿತ್ಯ 34 ಒಳಚರಂಡಿ ಸಂಸ್ಕರಿಸುವ ಘಟಕ(ಎಸ್‌ಟಿಪಿ)ದ ಮೂಲಕ 1,350 ಎಂಎಲ್‌ಡಿ ಸಂಸ್ಕರಿಸಲಾಗುತ್ತಿದೆ. ಅಲ್ಲದೆ, ಮತ್ತಷ್ಟು ನೀರನ್ನು ಸಂಸ್ಕರಿಸುವ ಗುರಿ ಹೊಂದಿದ್ದು, ಇದಕ್ಕಾಗಿ 12 ಎಸ್‌ಟಿಪಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜನರಲ್ಲಿ ಸಂಸ್ಕರಿಸಿದ ನೀರಿನ ಬಗ್ಗೆ ಭರವಸೆ ಮೂಡಿಸಲು ಎಸ್‌ಟಿಪಿಗಳನ್ನು ಸಂಪನ್ಮೂಲ ಚೇತರಿಕೆ ಘಟಕ ಎಂದು ಬ್ರ್ಯಾಂಡಿಂಗ್ ಮಾಡಬೇಕಿದೆ ಎಂದು ಹೇಳಿದರು