ಫರೀದಾಬಾದ್ ಜೈಲಿನಲ್ಲಿ ಹೆಸರಿನ ಗೊಂದಲ: ತಪ್ಪಾದ ಆರೋಪಿಗೆ ಜಾಮೀನು!

ಫರೀದಾಬಾದ್: ಒಂದೇ ಹೆಸರಿನ ಇಬ್ಬರು ಆರೋಪಿಗಳು ಒಂದೇ ಜೈಲಿನಲ್ಲಿ ಇದ್ದು ಜೈಲು ಸಿಬ್ಬಂದಿಗಳ ಪ್ರಮಾದದಿಂದ ಯಾರಿಗೋ ಸಿಕ್ಕಿದ ಜಾಮೀನಿನಿಂದ ಇನ್ಯಾರೋ ಹೊರ ಬಂದಿರುವ ಘಟನೆ ಫರೀದಾಬಾದ್ ಜೈಲಿನಲ್ಲಿ ನಡೆದಿದೆ.

ಏನಿದು ಪ್ರಕರಣ:
ಫರೀದಾಬಾದ್ ಜೈಲಿನಲ್ಲಿ ನಿತೇಶ್ ಎಂಬ ಹೆಸರಿನ ಇಬ್ಬರು ಆರೋಪಿಗಳಿದ್ದರು ಅದರಲ್ಲಿ ಹಲ್ಲೆ ನಡೆಸಿ ಜೈಲಿನಲ್ಲಿರುವ ನಿತೇಶ್ ಎಂಬ ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು ಆದರೆ ಫರೀದಾಬಾದ್ ಜೈಲು ಸಿಬ್ಬಂದಿ ಹಲ್ಲೆ ನಡೆಸಿರುವ ನಿತೇಶ್ ನನ್ನು ಜೈಲಿನಿಂದ ಬಿಡುಗಡೆ ಮಾಡುವ ಬದಲು ಅದೇ ಜೈಲಿನಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿ ನಾಲ್ಕು ವರ್ಷದಿಂದ ಜೈಲಿನಲ್ಲಿರುವ ನಿತೇಶ್ ಎಂಬ ಇನ್ನೋರ್ವ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ.
ಹೆಸರಿನಲ್ಲಿ ಗೊಂದಲ:
ಇಬ್ಬರು ಆರೋಪಿಗಳ ಹೆಸರು ನಿತೇಶ್ ಆಗಿದ್ದು ಅವರ ತಂದೆಯ ಹೆಸರು ಕೂಡಾ ಒಂದೇ (ರವೀಂದರ್) ಆಗಿರುವುದು ಗೊಂದಲಗಳಿಗೆ ಕಾರಣವಾಗಿದೆ, ಸಾಮಾನ್ಯವಾಗಿ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿದ್ದರೆ ಅವರ ತಂದೆಯ ಹೆಸರಿನಿಂದ ಗುರುತು ಪತ್ತೆಹಚ್ಚುವ ಕೆಲಸ ನಡೆಯುತ್ತದೆ ಆದರೆ ಇಲ್ಲಿ ಆರೋಪಿ ಹಾಗೂ ತಂದೆಯ ಹೆಸರು ಎರಡೂ ಒಂದೇ ಆಗಿರುವುದರಿಂದ ಜೈಲು ಸಿಬ್ಬಂದಿಗಳು ಗೊಂದಲಕ್ಕೊಳಗಾಗಿದ್ದಾರೆ.
ಅಕ್ಟೋಬರ್ 2021 ರಲ್ಲಿ ಸೆಕ್ಟರ್ 58 ರಲ್ಲಿ ಒಂಬತ್ತು ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಿತೇಶ್ ಪಾಂಡೆಯನ್ನು ಪೊಲೀಸರು ಬಂಧಿಸಿದ್ದರು ಆದರೆ ಅದೇ ಜೈಲಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಇದೇ ತಿಂಗಳ ಮೇ 24 ರಂದು ಫರಿದಾಬಾದ್‌ನ ಶಾಸ್ತ್ರಿ ಕಾಲೋನಿಯ ನಿವಾಸಿ ನಿತೇಶ್ ನನ್ನು ಬಂಧಿಸಲಾಗಿತ್ತು ಇದಾದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು ಅದರಂತೆ ಆತನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು ಆದರೆ ಜೈಲು ಸಿಬ್ಬಂದಿಯ ಗೊಂದಲದಿಂದ ಪ್ರಮಾದ ಸೃಷ್ಟಿಯಾಗಿದೆ.
ಇನ್ನು ಈ ಕುರಿತು ಮಾಹಿತಿ ನೀಡಿದ ಜೈಲು ಅಧಿಕಾರಿ ಒಂದೇ ಹೆಸರಿನ ಇಬ್ಬರು ಆರೋಪಿಗಳು ಇದ್ದುದರಿಂದ ಅಲ್ಲದೆ ಆರೋಪಿಗಳ ತಂದೆಯ ಹೆಸರೂ ಕೂಡ ಒಂದೇ ಆಗಿರುವುದರಿಂದ ಸಿಬ್ಬಂದಿಗಳು ಗೊಂದಲಗೊಂಡು ತಪ್ಪಾದ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಸದ್ಯ ತಲೆಮರೆಸಿಕೊಂಡಿರುವ ಬಿಹಾರದ ಪಾಟ್ನಾ ನಿವಾಸಿ ನಿತೇಶ್ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.
