ಮೈಸೂರು: ‘ಎಡಗೈ ಸಮುದಾಯದ ಮಕ್ಕಳಿಲ್ಲದ ಶಾಲೆಗೆ ರಾಜೀನಾಮೆ’ ಎಂದು ವಾಟ್ಸಪ್ ಸಂದೇಶ ಕಳುಹಿಸಿದ್ದ ದೈಹಿಕ ಶಿಕ್ಷಕ ರವಿ ಅಮಾನತು

ಮೈಸೂರು: ಮೈಸೂರಿನಲ್ಲಿ ದೈಹಿಕ ಶಿಕ್ಷಕರೊಬ್ಬರು ಜಾತಿ ವಿಚಾರವಾಗಿ ಕಳುಹಿಸಿದ್ದ ಸಂದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಎಚ್.ಡಿ. ಕೋಟೆ ಪಟ್ಟಣದ ಯರಹಳ್ಳಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ (P. E Teacher) ರವಿ, ತಮ್ಮ ಎಡಗೈ ಸಮುದಾಯದ ಮಕ್ಕಳಿಲ್ಲದ ಶಾಲೆಗೆ ಶಿಕ್ಷಕನಾಗಿರಲು ಸಾಧ್ಯವಿಲ್ಲ, ರಾಜಿನಾಮೆ ಕೊಡುತ್ತೇನೆಂದು ವಾಟ್ಸಪ್ ಗ್ರೂಪ್ನಲ್ಲಿ ಸಂದೇಶ ಕಳುಹಿಸಿದ್ದರು. ಈ ಹಿನ್ನೆಲೆ ಬಲಗೈ ಸಮಾಜದ ಮುಖಂಡರು ದೂರು ನೀಡಿದ್ದು, ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

ಎಚ್.ಸಿ. ಮಹದೇವಪ್ಪ ಅವರ ಕುರಿತಾಗಿಯೂ ಸಂದೇಶದಲ್ಲಿ ಟೀಕೆ
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಎಡಗೈ ಜಿಲ್ಲಾ ನೌಕರರ ಸಂಘದ ವಾಟ್ಸಪ್ ಗ್ರೂಪ್ನಲ್ಲಿ ಸಂದೇಶ ಕಳುಹಿಸಿದ್ದ ಶಿಕ್ಷಕ ರವಿ, ‘ಕಳೆದ 18 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದೇನೆ. ಆದರೆ, ತಮ್ಮ ಶಾಲೆಯಲ್ಲಿ ಎಡಗೈ ಸಮುದಾಯದ ಒಬ್ಬರೂ ವಿದ್ಯಾರ್ಥಿಗಳಿಲ್ಲದಿರುವುದು ಮನಸ್ಸಿಗೆ ನೋವು ತಂದಿದ್ದು, ಇದರಿಂದ ಬೇಸತ್ತು ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ಸಚಿವ ಎಚ್.ಸಿ.ಮಹದೇವಪ್ಪ ಅವರ ಕುರಿತಾಗಿಯೂ ಸಂದೇಶದಲ್ಲಿ ಟೀಕೆ ಮಾಡಿದ್ದಾರೆ.
ದೈಹಿಕ ಶಿಕ್ಷಕನ ಅಮಾನತು
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಬಲಗೈ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಶಿಕ್ಷಕನ ವಿರುದ್ಧ ಬ್ಲಾಕ್ ಶಿಕ್ಷಣಾಧಿಕಾರಿಗೆ (ಬಿಇಒ) ದೂರು ಸಲ್ಲಿಸಿದ್ದಾರೆ. ಅವರು, ರವಿ ಅವರ ಸಂದೇಶವು ಸಮುದಾಯಗಳ ಮಧ್ಯೆ ವೈಮನಸ್ಸು ಉಂಟುಮಾಡುವ ಪ್ರಚೋದನಕಾರಿ ಹೇಳಿಕೆ ಎಂದು ಆರೋಪಿಸಿದ್ದಾರೆ. ದೂರು ಮತ್ತು ವರದಿ ಆಧರಿಸಿ ಬಿಇಒ ಅವರು ಶಿಕ್ಷಕನ ವಿರುದ್ಧ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.