ಆಸ್ಟ್ರೇಲಿಯಾ ಸರಣಿಗೂ ಮುನ್ನ ಕಿಂಗ್ ಕೊಹ್ಲಿಯ ನಿಗೂಢ ಟ್ವೀಟ್: ಗೌತಮ್ ಗಂಭೀರ್ ಹೇಳಿಕೆಗೆ ಕೌಂಟರ್ ಕೊಟ್ಟರಾ ವಿರಾಟ್ ಕೊಹ್ಲಿ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಕಾಂಗರೂನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಲಾಗುತ್ತದೆ. ಮೊದಲಿಗೆ 3 ಮ್ಯಾಚ್ಗಳ ಏಕದಿನ ಸರಣಿ ನಡೆದರೆ, ಆ ಬಳಿಕ ಐದು ಪಂದ್ಯಗಳ ಟಿ20 ಸರಣಿ ಜರುಗಲಿದೆ.
ಆಸ್ಟ್ರೇಲಿಯಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟ್ವೀಟ್: ಹೊಸ ಚರ್ಚೆ ಶುರು
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಟೀಮ್ ಇಂಡಿಯಾ ಪರ ಒಂದೇ ಪಂದು ಮ್ಯಾಚ್ ಆಡಿಲ್ಲ. ಇದೀಗ ಆಸೀಸ್ ಪಿಚ್ನಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ಕೊಹ್ಲಿ ಸರಣಿ ಆರಂಭಕ್ಕೂ ಮುನ್ನ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಅದು ಸಹ ನಿಗೂಢ ಅರ್ಥ ಹೊಂದಿರುವ ಟ್ವೀಟ್ನೊಂದಿಗೆ..!

ಸಾಮಾನ್ಯವಾಗಿ ವಿರಾಟ್ ಕೊಹ್ಲಿ ತಮ್ಮ ವೈಯುಕ್ತಿಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿಲ್ಲ. ಅದರಲ್ಲೂ ಅಭಿಮಾನಿಗಳ ತಲೆಗೆ ಹುಳ ಬಿಡುವಂತಹ ಟ್ವೀಟ್ಗಳಿಂದ ಕೊಹ್ಲಿ ದೂರ. ಆದರೆ ಈ ಬಾರಿ ಕೊಹ್ಲಿ ಹಂಚಿಕೊಂಡಿರುವ ಟ್ವೀಟ್ವೊಂದು ಚರ್ಚೆಗೆ ಕಾರಣವಾಗಿದೆ.
ನೀವು ನಿಜವಾಗಲೂ ಸೋಲುವುದು ಯಾವಾಗ ಅಂದರೆ, ನೀವು ಬಿಟ್ಟು ಕೊಡಲು ನಿರ್ಧರಿಸಿದಾಗ… ಎಂಬಾರ್ಥದ ವಾಕ್ಯವನ್ನು ವಿರಾಟ್ ಕೊಹ್ಲಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇತ್ತ ಆಸ್ಟ್ರೇಲಿಯಾ ಸರಣಿಗೂ ಮುನ್ನ ಕೊಹ್ಲಿ ಹೀಗಂದಿರುವುದು ಯಾಕೆ ಎಂಬುದು ಈಗ ಅಭಿಮಾನಿಗಳ ಪ್ರಶ್ನೆ.
ಕೌಂಟರ್ ಕೊಟ್ರಾ ಕೊಹ್ಲಿ?
ಆಸ್ಟ್ರೇಲಿಯಾ ವಿರುದ್ಧದ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಏಕದಿನ ಸರಣಿ ಎಂಬ ಮಾತುಗಳು ಮೊದಲಿಂದಲೂ ಕೇಳಿ ಬರುತ್ತಿದೆ. ಆದರೆ ಅತ್ತ ವಿರಾಟ್ ಕೊಹ್ಲಿ ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.
ಇದಾಗ್ಯೂ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಏಕದಿನ ವಿಶ್ವಕಪ್ ಭವಿಷ್ಯದ ಬಗ್ಗೆ ಮಾತನಾಡಲು ಗೌತಮ್ ಗಂಭೀರ್ ನಿರಾಕರಿಸಿದ್ದರು. ಅಲ್ಲದೆ ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ, ಆಮೇಲೆ ನೋಡೋಣ ಎನ್ನುವ ಮೂಲಕ ಉತ್ತರ ನೀಡಿದ್ದರು.
ಇತ್ತ ಗೌತಮ್ ಗಂಭೀರ್ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುಂದಿನ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಗುರಿ ಹೊಂದಿರುವುದು ಗೊತ್ತಿದೆ. ಇದಾಗ್ಯೂ ಸ್ಪಷ್ಟ ಉತ್ತರ ನೀಡದೇ ನುಣುಚಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಗೌತಮ್ ಗಂಭೀರ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಮುಂಬರುವ ಏಕದಿನ ವಿಶ್ವಕಪ್ವರೆಗೆ ತಂಡದಲ್ಲಿ ಉಳಿಸಿಕೊಳ್ಳುವುದು ಅನುಮಾನ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳ ಹರಿದಾಟದೆ ನಡುವೆಯೇ ಇದೀಗ ವಿರಾಟ್ ಕೊಹ್ಲಿ ಸೋಲೊಪ್ಪುದಿಲ್ಲ ಎಂಬಾರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ನೀವು ಬಿಟ್ಟು ಕೊಡಲು ನಿರ್ಧರಿಸಿದರೆ, ಅದುವೇ ನಿಜವಾದ ಸೋಲು ಎಂಬಾರ್ಥದಲ್ಲಿ ಟ್ವೀಟಿಸಿ ಇದೀಗ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ಗೆ ಕೌಂಟರ್ ಕೊಟ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.